ಸಿನಿವಾಣಿ

ಒಂದೇ ಚಿತ್ರದಲ್ಲಿ ಐದು ಪ್ರೇಮ ಕಥೆಗಳು ... ಇದು 'ಪ್ರೇಮಂ ಚಿರಂ'

ಬೆಂಗಳೂರು: ಒಂದು ಸಿನಿಮಾದಲ್ಲಿ ಒಂದು ಲವ್​ಸ್ಟೋರಿ ಇರುವುದು ಸಹಜ. ಆದರೆ, ಒಂದೇ ಚಿತ್ರದಲ್ಲಿ ಐದು ಪೇಮಕಥೆಗಳು ಇರುವುದನ್ನು ಕೇಳಿದ್ದೀರಾ? ಕನ್ನಡದಲ್ಲಿ ಅಂಥದ್ದೊಂದು ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ. ಅದೇ 'ಪ್ರೇಮಂ ಚಿರಂ'.

'ಪ್ರೇಮಂ ಚಿರಂ' ಚಿತ್ರವು ಐದು ವಿಭಿನ್ನ ಪ್ರೇಮಕಥೆಗಳಿರುವ ಒಂದು ಚಿತ್ರ. ಪ್ರೀತಿಯ ವಿವಿಧ ಮಜಲುಗಳನ್ನು ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದ್ದು, ಈಗಾಗಲೇ ಹುಬ್ಬಳ್ಳಿ, ದಾಂಡೇಲಿ ಮುಂತಾದ ಕಡೆ ಚಿತ್ರೀಕರಣವಾಗಿದೆ. ಶೇ. 80ರಷ್ಟು ಚಿತ್ರೀಕರಣ ಮುಗಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ಚಿತ್ರವನ್ನು ಸಂಪೂರ್ಣಗೊಳಿಸುವುದಕ್ಕೆ ಚಿತ್ರತಂಡ ತಯಾರಿ ನಡೆಸಿದೆ.

ಇದೊಂದು ಹೊಸಬರ ತಂಡವಾಗಿದ್ದು, ಸಾಕಷ್ಟು ಹೊಸಬರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ಹುಬ್ಬಳ್ಳಿಯ ಹೊಸ ಪ್ರತಿಭೆಗಳು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ನೀನಾಸಂ ಠಾಕೂರ್​, ಪ್ರೀತಿ ಚೇಷ್ಠ, ಸಂಗಮೇಶ್​, ಸೌಮ್ಯ, ಸೂರ್ಯ, ಪಿಂಕಿ ಕೌರ್​, ಮುಂತಾದವರು ನಟಿಸಿರುವ ಈ ಚಿತ್ರವನ್ನು ಸ್ನೇಹಿತರೆಲ್ಲಾ ಸೇರಿಕೊಂಡು, ಧೃತಿ ಪ್ರೊಡಕ್ಷನ್ಸ್​ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ, ಅದರಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಈ ಚಿತ್ರವನ್ನು ಶ್ರೀನಿವಾಸ್​ ಎನ್ನುವವರು ನಿರ್ದೇಶಿಸಿದ್ದು, ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದಾರೆ. ರೋಹನ್​ ದೇಸಾಯಿ ಚಿತ್ರಕ್ಕೆ ಸಂಗೀತ ಸಂಯೋಜಿಸುವುದರ ಜೊತೆಗೆ ಛಾಯಾಗ್ರಹಣವನ್ನೂ ಮಾಡುತ್ತಿದ್ದಾರೆ.