ಹೈದರಾಬಾದ್: ಯಶ್ ಅಭಿನಯದ 'ಕೆಜಿಎಫ್' ಚಿತ್ರದ ಮೂಲಕ ರಾತ್ರೋರಾತ್ರಿ ಹಿಟ್ ಆದವರೆಂದರೆ ಅದು ರಾಮಚಂದ್ರ ರಾಜು ಅಲಿಯಾಸ್ ಗರುಡ್ ರಾಮ್. ಯಶ್ ಅವರ ಬಾಡಿಗಾರ್ಡ್ ಆಗಿ ಗುರುತಿಸಿಕೊಂಡಿದ್ದ ರಾಮಚಂದ್ರ ರಾಜು, 'ಕೆಜಿಎಫ್' ಚಿತ್ರ ಹಿಟ್ ಆಗುತ್ತಿದ್ದಂತೆಯೇ ಗರುಡ ರಾಮ್ ಎಂದೇ ಜನಪ್ರಿಯರಾಗಿದ್ದಾರೆ.
ಹೀಗೆ ಜನಪ್ರಿಯರಾದ ರಾಮ್ ನಂತರದ ದಿನಗಳಲ್ಲಿ ಕನ್ನಡದ ಒಂದಿಷ್ಟು ಚಿತ್ರಗಳಲ್ಲಿ ನಟಿಸುವುದರ ಜತೆಗೆ, ಟಾಲಿವುಡ್ಗೂ ಎಂಟ್ರಿ ಕೊಡುತ್ತಾರೆ ಎಂದು ಸುದ್ದಿಯಾಗಿತ್ತು. ಈಗ ರಾಮ್ ಅಭಿನಯದ ಮೊದಲ ತೆಲುಗು ಚಿತ್ರದಲ್ಲಿನ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಬಿಡುಗಡೆಯಾಗಿದೆ.
'ಮಹಾ ಸಮುದ್ರಂ' ಎಂಬ ಚಿತ್ರದಲ್ಲಿ ರಾಮ್, ಧನಂಜಯ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ನೆಗೆಟಿವ್ ಪಾತ್ರವಾಗಿದ್ದು, ಅವರ ಪಾತ್ರದ ಪೋಸ್ಟರ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿ ದೊಡ್ಡ ಸುದ್ದಿ ಮಾಡುತ್ತಿದೆ.
ಅಂದಹಾಗೆ, 'ಮಹಾ ಸಮುದ್ರಂ' ಚಿತ್ರವನ್ನು ಅಜಯ್ ಭೂಪತಿ ಎನ್ನುವವರು ನಿರ್ದೇಶಿಸುತ್ತಿದ್ದು, ಶರ್ವಾನಂದ್ ಮತ್ತು ಸಿದ್ಧಾರ್ಥ್ ಹೀರೋಗಳಾಗಿ ನಟಿಸುತ್ತಿದ್ದಾರೆ. ಅದಿತಿ ರಾವ್ ಹೈದರಿ, ಅನು ಇಮ್ಯಾನ್ಯುಯಲ್, ಜಗಪತಿ ಬಾಬು, ರಾವ್ ರಮೇಶ್ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಅರ್ಧ ಭಾಗದ ಚಿತ್ರೀಕರಣ ಮುಗಿದಿದೆ.