ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಗಳ ಫಸ್ಟ್ ಫೋಟೋ ರಿಲೀಸ್
ಗುಂಡಿನ ದಾಳಿ ನಡೆಸಲು ಬಳಕೆ ಮಾಡಿಕೊಂಡಿದ್ದ ಬೈಕ್ ಅಂಧೇರಿ ರೈಲು ನಿಲ್ದಾಣದ ಬಳಿ ಪತ್ತೆ
ಒಬ್ಬ ಶಂಕಿತನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ತೀವ್ರ ತನಿಖೆ
ಮುಂಬೈ: ಬಾಲಿವುಡ್ನ ಸೂಪರ್ಸ್ಟಾರ್ ಟೈಗರ್ ಶ್ರಾಫ್ ಅವರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ತನಿಖೆ ಚುರುಕೊಂಡಿದೆ. ಕೃತ್ಯಕ್ಕೆ ಕಾರಣರಾದ ಇಬ್ಬರು ಆರೋಪಿಗಳ ಮೊದಲ ಫೋಟೋ ರಿವೀಲ್ ಮಾಡಲಾಗಿದ್ದು, ಘಟನೆಗೆ ಬಳಸಿದ ಗಾಡಿಯನ್ನು ಹಾಗೂ ಶಂಕಿತ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಮುಂಬೈನ ಜೂಹು ಪ್ರದೇಶದಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಭಾನುವಾರ (ಅ.18) ಸಂಜೆ ಗುಂಡಿನ ದಾಳಿ ನಡೆದಿತ್ತು. ಈ ಘಟನೆಯ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಕ್ಷಣ ಕ್ಷಣಕ್ಕೂ ಅಚ್ಚರಿ ವಿಚಾರಗಳು, ತಿರುವುಗಳನ್ನು ಈ ಕೇಸ್ ಪಡೆದುಕೊಳ್ಳುತ್ತಿದೆ.
ಆರೋಪಿಗಳು ಘಟನಾ ಸ್ಥಳದ ಸುತ್ತಮುತ್ತ ಸಂಚರಿಸುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದರ ಪ್ರಕಾರ ಇಬ್ಬರು ಶಂಕಿತ ಆರೋಪಿಗಳು ಬಿಳಿ ಶರ್ಟ್ ಧರಿಸಿರುವುದು ಕಂಡುಬಂದಿದೆ. ಇಬ್ಬರ ಫೋಟೋವನ್ನು ಪೊಲೀಸರು ರಿಲೀಸ್ ಮಾಡಿದ್ದಾರೆ. ಅದರಲ್ಲಿ ಒಬ್ಬ ಪೂಮಾ ಬ್ರಾಂಡ್ನ ಲೋಗೋ ಇರುವ ಕಪ್ಪು ಬಣ್ಣದ ಕ್ಯಾಪ್ ಧರಿಸಿದ್ದಾರೆ.
ಮತ್ತೊಂದು ಕಡೆ ಆರೋಪಿಗಳು ಘಟನೆಗೆ ಬಳಕೆ ಮಾಡಿದ ಬೈಕ್ ಪತ್ತೆಯಾಗಿದೆ. ದಾಳಿ ಕೋರನ ಹೆಸರಿನಲ್ಲಿಲ್ಲದ ಬೈಕ್ ಅಂಧೇರಿ ರೈಲು ನಿಲ್ದಾಣದ ಬಳಿ ಪತ್ತೆಯಾಗಿದೆ. ಈ ಬೈಕ್ ಮುಂಬೈನಲ್ಲಿ ನೋಂದಣಿಯಾಗಿದ್ದು, ಇದರ ನಂಬರ್ ಪ್ಲೇಟ್, ಚಾಸಿ ಹಾಗೂ ಎಂಜಿನ್ ನಂಬರ್ಗಳನ್ನು ಪರಿಶೀಲಿಸಿ ಅದರ ಹಿನ್ನೆಲೆಯನ್ನು ಕಲೆಹಾಕಲಾಗುತ್ತಿದೆ. ಸದ್ಯ ಬೈಕ್ ಪೊಲೀಸರ ವಶದಲ್ಲಿದೆ.
ಸದ್ಯ ಪೊಲೀಸರು ಮಾಹಿತಿ ಕಲೆ ಹಾಕಿರುವ ಪ್ರಕಾರ, ಇಬ್ಬರು ನಟನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಮತ್ತೊಬ್ಬ ವ್ಯಕ್ತಿ ಬೈಕ್ ಮೇಲೆ ಕುಳಿತು ಪರಾರಿಯಾಗಲು ಕಾಯುತ್ತಿರುವುದು ದಾಖಲಾಗಿದೆ. ಒಬ್ಬ ವ್ಯಕ್ತಿ ಸರಣಿ ಗುಂಡು ಹಾರಿಸಿದ್ದರೆ, ಎರಡನೇ ವ್ಯಕ್ತಿಯೂ ಗುಂಡು ಹಾರಿಸಲು ಯತ್ನಿಸಿದ್ದಾನೆ. ಆದರೆ ಆತನ ಬಂದೂಕಿನಿಂದ ಗುಂಡು ಹಾರಿದೆಯೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೊನೆಯಲ್ಲಿ ಮೂವರೂ ಬೈಕ್ನಲ್ಲಿ ಪರಾರಿಯಾಗಿದ್ದಾರೆ.
36 ವರ್ಷದ ನಟ ಟೈಗರ್ ಶ್ರಾಫ್ ಫುಟ್ಬಾಲ್ ಮ್ಯಾಚ್ ಮುಗಿಸಿ ಹೊರಡುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುವವರಿಗೆ ಎಚ್ಚರಿಕೆ ನೀಡಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.
ದಾಳಿಕೋರರು ಕಾರಿನ ಮುಂಭಾಗ ಮತ್ತು ಟೈಗರ್ ಶ್ರಾಫ್ ಕುಳಿತಿದ್ದ ಸೀಟಿನ ಪಕ್ಕದ ಕಿಟಕಿ ಬಳಿ ನಿಂತು ಗುಂಡು ಹಾರಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಆದರೆ ಕಾರಿನ ಕಿಟಕಿ ಬಳಿ ಇದ್ದ ಶೂಟರ್ನ ಗನ್ ಜಾಮ್ ಆಗಿದ್ದರಿಂದ ಆತ ಗುಂಡು ಹಾರಿಸಲು ವಿಫಲನಾಗಿದ್ದಾನೆ. ಹಾಗಾಗಿ ಕೂದಲೆಳೆ ಅಂತರದಲ್ಲಿ ಟೈಗರ್ ಪ್ರಾಣ ಉಳಿದಿದೆ ಎನ್ನಲಾಗಿದೆ. ದಾಳಿ ಸಂಬಂಧ ಮುಂಬೈ ಪೊಲೀಸರು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸದ್ಯ ಪ್ರಕರಣದ ತನಿಖೆಗಾಗಿ ಮುಂಬೈ ಕ್ರೈಂ ಬ್ರಾಂಚ್ ಹಾಗೂ ಸ್ಥಳೀಯ ಪೊಲೀಸರನ್ನೊಳಗೊಂಡ 15 ವಿಶೇಷ ತಂಡಗಳನ್ನು ರಚಿಸಲಾಗಿದೆ. ವಿಧಿವಿಜ್ಞಾನ ತಂಡವು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಎಷ್ಟು ಸುತ್ತು ಗುಂಡು ಹಾರಿಸಲಾಗಿದೆ ಎಂಬುದನ್ನು ಪರಿಶೀಲಿಸುತ್ತಿದೆ, (ಏಜೆನ್ಸೀಸ್).