ವಿಜಯ್ ಅಭಿನಯದ ಜನ ನಾಯಗನ್​ ಸಿನಿಮಾ  
ಸಿನಿವಾಣಿ

ಕಡೆಗೂ 'ಜನ ನಾಯಗನ್'​ಗೆ ಸೆನ್ಸಾರ್​ ಮಂಡಳಿ ಗ್ರೀನ್​ ಸಿಗ್ನಲ್! ದಳಪತಿ ವಿಜಯ್​ ಕೊನೆಯ ಚಿತ್ರದ ರನ್​ಟೈಮ್​ ರಿವೀಲ್​

ಪ್ರಮುಖ ಮುಖ್ಯಾಂಶಗಳು

  • ಬಹುನಿರೀಕ್ಷಿತ ಜನ ನಾಯಗನ್​ ಚಿತ್ರಕ್ಕೆ ಸೆನ್ಸಾರ್​ ಮಂಡಳಿ ಎ ಸರ್ಟಿಫಿಕೆಟ್​
  • ದಳಪತಿ ವಿಜಯ್​ ಅಭಿನಯದ ಕೊನೆ ಚಿತ್ರದ ರಿಲೀಸ್​ ಜು.24ಕ್ಕೆ ಎಂಬ ವರದಿ
  • ಜನ ನಾಯಗನ್​ ಒಟ್ಟು ರನ್​ಟೈಮ್​ ರಿವೀಲ್​
Jana Nayagan: ಈ ವರ್ಷದ ಜ.09ರಂದೇ ತೆರೆಗೆ ಬರಬೇಕಿದ್ದ ವಿಜಯ್​ ಚಿತ್ರಕ್ಕೆ ಆರಂಭದಲ್ಲಿ ಸಾಕಷ್ಟು ಅಡಚಣೆಗಳು ಉಂಟಾಯಿತು. ಸೆನ್ಸಾರ್​ ಮಂಡಳಿ ತಡೆಗೆ ಚಿತ್ರತಂಡ ಕೋರ್ಟ್​ ಮೆಟ್ಟಿಲೇರಿದ್ದ ತಡ, ಅಂದಿನಿಂದ ಇಂದಿನವರೆಗೂ ಚಿತ್ರದ ಬಗ್ಗೆ ಒಂದೇ ಒಂದು ಸುದ್ದಿಯೂ ಇರಲಿಲ್ಲ. ಚುನಾವಣೆ ಇದ್ದ ಕಾರಣ, ತಾತ್ಕಾಲಿಕವಾಗಿ ಸಿನಿಮಾ ರಿಲೀಸ್​ ಮುಂದೂಡಿಕೆ ಆಗಿತ್ತು. ಆದರೆ, ಇಂತಹ ದಿನ ಎಂದು ಅಧಿಕೃತವಾಗಿ ಚಿತ್ರತಂಡಕ್ಕೆ ನಿರ್ಧರಿಸಲು ಸಾಧ್ಯವಾಗಿರಲಿಲ್ಲ. ಆದರೀಗ, ಸೆನ್ಸಾರ್​ ಮಂಡಳಿ ಚಿತ್ರಕ್ಕೆ ಎ ಸರ್ಟಿಫಿಕೆಟ್​ ಕೊಟ್ಟಿದೆ.
ಆಗೋದೆಲ್ಲ ಒಳ್ಳೆಯದಕ್ಕೆ ಎನ್ನುವಂತೆ ವಿಜಯ್ ಸಿಎಂ ಆದ ಬಳಿಕವೇ ಸಿನಿಮಾ ತೆರೆಗೆ ಬರುತ್ತಿರುವುದು, ಫ್ಯಾನ್ಸ್​ಗಳಲ್ಲಿ ನಟನ ಕ್ರೇಜ್​ ದುಪ್ಪಟ್ಟಾಗಿಸಿದೆ ಮತ್ತು ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಲಿದೆ. ವರದಿಗಳ ಪ್ರಕಾರ, ಜನ ನಾಯಗನ್​ ಚಿತ್ರವು ಇದೇ ಜುಲೈ 24ಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಕೆನಡಾ ಮೂಲದ ವಿತರಕರು ಹೇಳಿದ್ದಾರೆ. ಆದರೆ, ಈ ಬಗ್ಗೆ ಚಿತ್ರತಂಡ ಇಲ್ಲಿಯವರೆಗೆ ಯಾವುದೇ ರೀತಿಯಲ್ಲೂ ಅಧಿಕೃತವಾಗಿ ಘೋಷಿಸಿಲ್ಲ.
ಸಿನಿಮಾದ ಒಟ್ಟು ರನ್​ಟೈಮ್​ ಕೂಡ ರಿವೀಲ್​ ಆಗಿದ್ದು, ನಟನ ಅಭಿಮಾನಿಗಳು ಮತ್ತು ಸಿನಿಪ್ರೇಮಿಗಳು ಬರೋಬ್ಬರಿ 183 ನಿಮಿಷ ಅಂದರೆ ಮೂರು ತಾಸು ಚಿತ್ರಮಂದಿರದಲ್ಲಿ ಕುಳಿತು ಚಿತ್ರ ನೋಡಬೇಕಿದೆ. ಚಿತ್ರವನ್ನು ಎಚ್. ವಿನೋದ್ ನಿರ್ದೇಶಿಸಿದ್ದು, ವಿಜಯ್​ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಮಮಿತಾ ಬೈಜು, ಬಾಬಿ ಡಿಯೋಲ್, ಪ್ರಿಯಾಮಣಿ ಸೇರಿ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ತಮ್ಮ ಚೊಚ್ಚಲ ರಾಜಕೀಯ ಪ್ರವೇಶದಲ್ಲಿಯೇ ತಮಿಳುನಾಡಿನ ಜನತೆಯಿಂದ ಅಭೂತಪೂರ್ವ ಬೆಂಬಲ ಪಡೆದ ವಿಜಯ್​ಗೆ ಇಂದಿಗೂ ಗಣ್ಯರು, ಚಿತ್ರರಂಗದ ಕಲಾವಿದರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಸಿಎಂ ಆಗಿ ತಮಿಳುನಾಡಿನಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ತಂದಿರುವ ವಿಜಯ್,​ ತಾನೂ ಕೂಡ ಜನಸಾಮಾನ್ಯರಲ್ಲಿ ಒಬ್ಬ ಎಂಬಂತೆ ಸರಳವಾಗಿ ಬಸ್​ ಪ್ರಯಾಣ, ತಮ್ಮ ಕಾರನ್ನು ತಾವೇ ಚಲಾಯಿಸುವ ಮೂಲಕ ರಾಜ್ಯದ ಜನತೆಯ ಹೃದಯವನ್ನು ಗೆಲ್ಲುತ್ತಿದ್ದಾರೆ. ಈಗ ಅವರ ಸಿನಿಮಾ ಬಿಡುಗಡೆಗೆ ನಿರೀಕ್ಷೆಗಳು ಡಬಲ್​ ಆಗಿದ್ದು, ಫ್ಯಾನ್ಸ್​ಗಳು ನಿರ್ಮಾಣ ಸಂಸ್ಥೆಯ ಅಧಿಕೃತ ಘೋಷಣೆಗಾಗಿ ಕಾಯುತ್ತಿದ್ದಾರೆ,(ಏಜೆನ್ಸೀಸ್).