ಸಿನಿವಾಣಿ

ಚಿತ್ರಮಂದಿರ ಮತ್ತೆ ಖಾಲಿಖಾಲಿ! ಈ ವಾರ ಕೇವಲ ಒಂದೇ ಸಿನಿಮಾ ಬಿಡುಗಡೆ

arunakunigal

ಬೆಂಗಳೂರು: ಮೊದಲು ‘ಆಕ್ಟ್ 1978’, ನಂತರ ‘ಅರಿಷಡ್ವರ್ಗ’, ‘ಗಡಿಯಾರ’ ಹಾಗೂ ‘ಮುಖವಾಡ ಇಲ್ಲದವನು 84’ ... ಹೀಗೆ ಎರಡು ವಾರಗಳ ಅಂತರದಲ್ಲಿ ನಾಲ್ಕು ಹೊಸ ಕನ್ನಡ ಸಿನಿಮಾಗಳ ಬಿಡುಗಡೆ ಕಂಡ ಕನ್ನಡ ಚಿತ್ರರಂಗಕ್ಕೆ ಮತ್ತೊಮ್ಮೆ ಮುಂದೇನು ಎಂಬ ಪ್ರಶ್ನೆ ಎದುರಾಗಿದೆ. ಏಕೆಂದರೆ, ಈ ಶುಕ್ರವಾರ ಒಂದೇ ಒಂದು ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಮಿಕ್ಕಂತೆ ಯಾರೂ ಚಿತ್ರ ಬಿಡುಗಡೆ ಮಾಡುವುದಕ್ಕೆ ಮುಂದೆ ಬರುತ್ತಿಲ್ಲ.

ಹೌದು, ‘ಆಕ್ಟ್ 1978’ ನಂತರ ಇನ್ನೊಂದಿಷ್ಟು ಹೊಸ ಕನ್ನಡ ಚಿತ್ರಗಳು ಬಿಡುಗಡೆಯಾಗಬಹುದು, ಕ್ರಮೇಣ ಚಿತ್ರರಂಗದ ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಚಿತ್ರರಂಗ ಮತ್ತು ಪ್ರೇಕ್ಷಕರಿಗೆ ಈ ವಾರ ಮತ್ತೆ ನಿರಾಸೆಯಾಗಿದೆ. ಏಕೆಂದರೆ, ‘ಆಕ್ಟ್ 1978’ ಚಿತ್ರದ ನಂತರ ಪ್ರೇಕ್ಷಕರು ನಿಧಾನಕ್ಕೆ ಚಿತ್ರಮಂದಿರದತ್ತ ಬರುವ ಧೈರ್ಯ ತೋರಿಸಿದ್ದರು. ಒಂದಿಷ್ಟು ನಿರೀಕ್ಷಿತ ಚಿತ್ರಗಳು ಬಿಡುಗಡೆಯಾದರೆ ಮತ್ತೆ ಎಲ್ಲವೂ ಮೊದಲಿನಂತಾಗುತ್ತದೆ ಎಂಬ ಆಶಾಭಾವನೆ ಚಿತ್ರರಂಗದಲ್ಲಿತ್ತು. ಆದರೆ, ‘ಆಕ್ಟ್ 1978’ ಚಿತ್ರದ ನಂತರ ಯಾವುದೇ ನಿರೀಕ್ಷಿತ ಚಿತ್ರ ಬಿಡುಗಡೆ ಆಗಲಿಲ್ಲ.

ಕಳೆದ ವಾರ ಬಿಡುಗಡೆಯಾದ ಚಿತ್ರಗಳಿಗೆ ವಾರಾಂತ್ಯದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕರೂ, ಮಿಕ್ಕಂತೆ ವಾರದ ದಿನಗಳಲ್ಲಿ ಪ್ರೇಕ್ಷಕರ ಕೊರತೆ ಕಾಣುತ್ತಿದೆ. ಪ್ರೇಕ್ಷಕರು ಚಿತ್ರಮಂದಿರದತ್ತ ಬರುವುದಕ್ಕೆ ಹಿಂದೇಟು ಹಾಕುತ್ತಿರುವುದರಿಂದ ಈಗಾಗಲೇ ಚಿತ್ರಪ್ರದರ್ಶನ ಪ್ರಾರಂಭಿಸಿರುವ ಚಿತ್ರಮಂದಿರದವರು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಏಕೆಂದರೆ, ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವುದಕ್ಕೆ ಪ್ರಮುಖವಾಗಿ ಸ್ಟಾರ್​ಗಳ ಚಿತ್ರಗಳು ಅಥವಾ ಒಂದಿಷ್ಟು ನಿರೀಕ್ಷಿತ ಚಿತ್ರಗಳಾದರೂ ಬಂದಿದ್ದರೆ, ಜನ ಚಿತ್ರಮಂದಿರಗಳತ್ತ ಬರುತ್ತಿದ್ದರೇನೋ? ಆದರೆ, ಈಗ ಸ್ಟಾರ್​ಗಳ ಚಿತ್ರಗಳೂ ಇಲ್ಲ. ಹಾಗೆಯೇ ನಿರೀಕ್ಷಿತ ಚಿತ್ರಗಳೂ ಬಿಡುಗಡೆಯಾಗುತ್ತಿಲ್ಲ. ಅಕ್ಟೋಬರ್ 15ರಂದು ಕೆಲವು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಪ್ರಾರಂಭವಾದರೂ, ಜನರಿಲ್ಲದೆ ಕೆಲವು ಕಡೆ ಚಿತ್ರಪ್ರದರ್ಶನ ನಿಲ್ಲಿಸಲಾಗಿತ್ತು. ಈಗ ಮತ್ತೊಮ್ಮೆ ಹೊಸ ಚಿತ್ರಗಳ ಅಭಾವ ಎದುರಾಗಿರುವುದರಿಂದ, ಚಿತ್ರಮಂದಿರದವರು ಏನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಚಿತ್ರ ನೋಡುವುದಕ್ಕೆ ಜನ ಬರುತ್ತಿದ್ದಾರೆ. ಆದರೆ, ಬಿಡುಗಡೆ ಮಾಡುವುದಕ್ಕೆ ಚಿತ್ರತಂಡದವರು ಹಿಂದೇಟು ಹಾಕುತ್ತಿದ್ದಾರೆ. ಏಕೆಂದರೆ, ಹೆಚ್ಚು ಖರ್ಚು ಮಾಡಿದವರಿಗೆ, ಹಾಕಿದ ಹಣವನ್ನು ಈ ಸಂದರ್ಭದಲ್ಲಿ ಮರಳಿ ಪಡೆಯುವುದು ಹೇಗೆ ಎಂಬ ಭಯವಿರುತ್ತದೆ. ಹಾಗಾಗಿ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ. ಇನ್ನು, ತಮ್ಮ ಚಿತ್ರದ ಬಗ್ಗೆ ಧೈರ್ಯ ಇಲ್ಲದವರು ಸಹ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಮುಂದೆ ಬರುತ್ತಿಲ್ಲ.

| ಮಂಸೋರೆ ಆಕ್ಟ್ 1978 ನಿರ್ದೇಶಕ