ಸಿನಿವಾಣಿ

ಅನಿರೀಕ್ಷಿತ ತಿರುವುಗಳ ಅರಿಷಡ್ವರ್ಗ!: ಸಿನಿಮಾ ವಿಮರ್ಶೆ

| ಮಂಜು ಕೊಟಗುಣಸಿ ಬೆಂಗಳೂರು 

ಒಂದೇ ಮಾತಿನಲ್ಲಿ ಹೇಳುವುದಾದರೆ, ‘ಅರಿಷಡ್ವರ್ಗ’ ಒಂದು ಮರ್ಡರ್ ಮಿಸ್ಟರಿ ಸಿನಿಮಾ. ಕೊಲೆಗಾರನನ್ನು ಪತ್ತೆ ಹಚ್ಚುವ ತನಿಖೆಯ ಬೆನ್ನಿಗಂಟಿಕೊಂಡೇ ಸಾಗುವ ಚಿತ್ರ. ಆದರೆ, ಇದನ್ನು ಹೊರತುಪಡಿಸಿ, ಇಡೀ ಸಿನಿಮಾದಲ್ಲಿ ಪ್ರಸ್ತುತ ಸಂದರ್ಭಕ್ಕೆ ತಕ್ಕುದಾದ ಒಂದಷ್ಟು ಅಂಶಗಳನ್ನು ನಿರ್ದೇಶಕರು ಬೆರೆಸಿದ್ದಾರೆ. ಅವೇ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮಾತ್ಸರ್ಯ! ಮಿಸ್ಟರಿಯ ಜತೆಗೆ ಬೆರೆಸಿರುವ ಈ ಅಂಶಗಳು ಸಿನಿಮಾದ ರುಚಿ ಹೆಚ್ಚಿಸಿವೆ.

ಅರಿಷಡ್ವರ್ಗಗಳನ್ನು ಆಧರಿಸಿ ಒಂದೊಂದು ಗುಣಕ್ಕೂ ಒಂದೊಂದು ಮನಃಸ್ಥಿತಿಯನ್ನು ಪಾತ್ರಗಳ ಮೂಲಕ ಕಟ್ಟಿಕೊಟ್ಟಿರುವ ನಿರ್ದೇಶಕರು, ಅವುಗಳನ್ನು ಪರದೆಯ ಮೇಲೆ ತೇಲಿಬಿಟ್ಟಿದ್ದಾರೆ. ಕಾಮದ ದಾಹ ಒಂದೆಡೆ ಕಾಣಿಸಿದರೆ, ಮೋಹ, ಮಾತ್ಸರ್ಯದ ಮುಖಗಳೂ ಬೇರೆ ಬೇರೆ ಪಾತ್ರಗಳಲ್ಲಿ ಮೂಡುತ್ತವೆ. ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಬೇರೆಯವನ ಸಂಗ ಬಯಸುವ ಪತ್ನಿ, ಮಹಿಳೆಯ ಬೆತ್ತಲೆ ವಿಡಿಯೋವನ್ನೇ ಅಸ್ತ್ರವಾಗಿಟ್ಟುಕೊಂಡು ಲೋಭಿಯಾಗಿರುವವನು ಒಂದೆಡೆಯಾದರೆ, ಹಣದ ಮೋಹಕ್ಕೆ ಸಿಲುಕುವ ವ್ಯಕ್ತಿಯೂ ಅರಿಷಡ್ವರ್ಗದಲ್ಲಿ ಬಂದುಹೋಗುತ್ತಾನೆ. ಸಂತಾನಹೀನತೆ ಮತ್ತು ಗಂಡು ವೇಶ್ಯೆ (ಗಿಗೊಲೊ) ಈ ಎರಡರ ವಿಚಾರವನ್ನೂ ಎತ್ತಿರುವ ನಿರ್ದೇಶಕರು, ಪ್ರಸ್ತುತ ಸಮಾಜದ ಒಂದಷ್ಟು ಏರಿಳಿತಗಳನ್ನು ಈ ಚಿತ್ರದಲ್ಲಿ ತಾತ್ವಿಕ ರೀತಿಯಲ್ಲಿ ಮುಟ್ಟಲು ಪ್ರಯತ್ನಿಸಿದ್ದಾರೆ. ಆದರೆ ಅದನ್ನೇ ನೇರವಾಗಿ ನಿರೂಪಿಸುವ ಬದಲು ಕೊಲೆಯ ರಹಸ್ಯದ ಸುತ್ತ ಕಥೆ ಹೆಣೆದಿದ್ದಾರೆ.

ಕ್ರಷರ್ ಮಾಲೀಕನಿಗೆ 50ರ ಮೇಲೆ ವಯಸ್ಸಾದರೂ, ಆತನಿಗೆ 36 ವರ್ಷದ ಎರಡನೇ ಪತ್ನಿ. ಪತಿಯಿಂದ ಕಾಮನೆಗಳು ಪೂರ್ಣ ಎನಿಸದಿದ್ದಾಗ ಆಕೆ ಬೇರೆಯವನೊಂದಿಗೆ ಒಂದಾಗುತ್ತಾಳೆ. ಅಲ್ಲಿಂದ ತೆರೆದುಕೊಳ್ಳುವ ಪುಟ ಹಲವು ರೋಚಕತೆಗಳನ್ನು ತೆರೆದಿಡುತ್ತ ಹೋಗುತ್ತದೆ. ಅನಿರೀಕ್ಷಿತ ತಿರುವುಗಳು ಎದುರಾಗುತ್ತವೆ. ಕೊಲೆಯೊಂದರ ಸುತ್ತ ತನಿಖೆ ತೀಕ್ಷ್ಣವಾಗುತ್ತದೆ. ಹೀಗೆ ಸಾಗುವ ಚಿತ್ರ ಕೊನೆಗೆ ಕೊಲೆಗಾರನ ಹುಡುಕುವಲ್ಲಿ ಯಶಸ್ವಿಯಾಗುತ್ತದೆ. ಆದರೆ, ಶಿಕ್ಷೆಗೆ ಗುರಿಯಾಗುವವನು ಮಾತ್ರ ನಿರಪರಾಧಿ! ಏಕೆಂದರೆ ಅಲ್ಲಿಯೂ ‘ಅರಿಷಡ್ವರ್ಗ’ ಆಟವಾಡುತ್ತದೆ. ಆ ತರ್ಕ ಮತ್ತು ಅದರಾಚೆಗಿನ ನೈಜತೆಯನ್ನು ಸಿನಿಮಾದಲ್ಲಿಯೇ ಕಣ್ತುಂಬಿಕೊಳ್ಳಬೇಕು. ಹಿನ್ನೆಲೆ ಸಂಗೀತ, ಛಾಯಾಗ್ರಹಣ ಚಿತ್ರದ ಮೂಡ್​ಗೆ ತಕ್ಕಂತೆ ಮೂಡಿಬಂದಿದ್ದು, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.