ಬೆಂಗಳೂರು: ಕರೊನಾ ಸೋಂಕಿನಿಂದ ಜಗತ್ತೇ ತತ್ತರಿಸಿಹೋಗಿದೆ. ಲಾಕ್ಡೌನ್ ಸಡಲಿಕೆ ನಂತರವೂ ಮೊದಲಿನ ಲವಲವಿಕೆ, ಕಳೆ ಕಾಣುತ್ತಿಲ್ಲ. ಎಲ್ಲೆಡೆ ಭಯ ಮತ್ತು ಆತಂಕದ ಸ್ಥಿತಿ ಇದೆ. ಅದರಲ್ಲೂ ಸಿನಿಮಾ ಕ್ಷೇತ್ರಕ್ಕಂತೂ ಕರೊನಾ ಕೊಟ್ಟ ಕಾಟ ಅಷ್ಟಿಷ್ಟಲ್ಲ.
ಶೂಟಿಂಗ್ ಇಲ್ಲ, ಸಿನಿಮಾ ಪ್ರದರ್ಶನ ದೂರದ ಮಾತು. ಹಾಗಾದರೆ, ಸಿನಿಮಾವನ್ನೇ ನಂಬಿ ಬದುಕುವವರ ಕಥೆ ಏನು? ಚಿತ್ರಮಂದಿರಗಳ ಪಾಡೇನು- ಸದ್ಯ ಈ ಪ್ರಶ್ನೆಗಳಿಗೆ ಉತ್ತರಿಸುವುದು ತುಸು ಕಷ್ಟವೇ. ಮತ್ತೆ ಸಿನಿಮಾ ಕೆಲಸಗಳಿಗೆ ಚಾಲನೆ ಸಿಗಬಹುದು ಎಂಬ ಆಶಾವಾದ ಇದೆಯಾದರೂ, ಮುಂದಿನ ದಿನಗಳು ಕಷ್ಟಕರ ಎಂಬ ಅರಿವೂ ಇದೆ. ಅದೆಲ್ಲ ವನ್ನು ಅರಿತೇ ಮುಂದಿನ ದಿನಗಳನ್ನು ಸವೆಸಬೇಕು ಎನ್ನುತ್ತಾರೆ ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್. ವಿಜಯವಾಣಿ ಜತೆ ಮಾತನಾಡಿದ ಅವರು, ಕರೊನಾದಿಂದಾಗಿ ಪ್ರದರ್ಶಕರ ಕಷ್ಟ-ನಷ್ಟಗಳ ಬಗ್ಗೆ ವಿವರಿಸಿದ್ದಾರೆ. ಇದನ್ನೂ ಓದಿ: ಪರಿಷತ್ ಚುನಾವಣೆಗೆ ಬಿಜೆಪಿ ಪಟ್ಟಿ ಬಿಡುಗಡೆ: ಮೇಲುಗೈ ಸಾಧಿಸಿದ ಸಿಎಂ ಬಿಎಸ್ವೈ
ಸ್ಪರ್ಧೆ ಹೆಚ್ಚಳ: ಕನ್ನಡದಲ್ಲಿ ವರ್ಷಕ್ಕೆ 220ರಿಂದ 250 ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಅದರಲ್ಲಿ ಗೆಲುವಿನ ಪ್ರಮಾಣ ಶೇ. 5 ಮಾತ್ರ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಕಡಿಮೆಯಾಗುವುದರ ಜತೆಗೆ, ಗುಣಮಟ್ಟದ ಮತ್ತು ಸ್ಟಾರ್ ನಟರ ಸಿನಿಮಾಗಳಷ್ಟೇ ತೆರೆಗೆ ಬಂದರೂ ಅಚ್ಚರಿ ಇಲ್ಲವಂತೆ. ‘ಇಷ್ಟು ದಿನ ಹೆಮ್ಮೆಯಿಂದ, ಖುಷಿಯಿಂದ ನಮ್ಮ ಸಿನಿಮಾ 50 ದಿನ, 100 ದಿನ ಓಡಿತು ಎಂದು ಹೇಳಿಕೊಳ್ಳುತ್ತಿದ್ದೆವು. ಆದರೆ, ಇನ್ನು ಮುಂದೆ ಹಾಗೆ ಹೇಳುವುದು ಕಷ್ಟಸಾಧ್ಯ. ಇದೆಲ್ಲವನ್ನೂ ಬದಿಗಿಟ್ಟರೆ, ಇನ್ನುಮುಂದೆ ಬಿಡುಗಡೆಯಾಗಲಿರುವ ಸಿನಿಮಾಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಲಿದೆ.ಸ್ಪರ್ಧೆಯೂ ಜೋರಾಗುತ್ತದೆ’ ಎಂಬುದು ಚಂದ್ರಶೇಖರ್ ದೂರದೃಷ್ಟಿಯ ನುಡಿ.
ಲಾಭದ ನಿರೀಕ್ಷೆ ಮಾಡಬೇಡಿ: ಕರೊನಾದಿಂದಾಗಿ ವಿಶ್ವ ಸಿನಿಮಾರಂಗ ತತ್ತರಿಸಿ ಹೋಗಿದೆ. ಈ ಕ್ಷೇತ್ರಕ್ಕೆ ವೀಕ್ಷಕರೇ ಬಂಡವಾಳ. ಅವರೇ ಇಲ್ಲದೆ ಇನ್ನೆಲ್ಲಿಯ ಸಿನಿಮಾ, ಇನ್ನೆಲ್ಲಿಯ ಹೌಸ್ಫುಲ್ ಪ್ರದರ್ಶನ! ‘20 ವರ್ಷದ ಹಿಂದೆ ನಮ್ಮ ಕನ್ನಡ ಸಿನಿಮಾಗಳ ಸ್ಥಿತಿ ಹೇಗಿತ್ತೋ, ಅದೇ ಸ್ಥಿತಿ ಇನ್ನು ಮುಂದುವರಿಯಲಿದೆ. 20 ವರ್ಷದ ಹಿಂದೆ ಒಂದು ಸಿನಿಮಾ ಬಿಡುಗಡೆ ಆದಾಗ, ನಮಗೆಷ್ಟು ಆದಾಯ ಬರುತ್ತಿತ್ತೋ ಅಷ್ಟೇ ಇನ್ನುಮುಂದೆ ಬರಲಿದೆ. ಲಾಭದ ನಿರೀಕ್ಷೆ ಮಾಡುವುದೂ ಮುಂದಿನ ದಿನಗಳಲ್ಲಿ ಕಷ್ಟ’ ಎನ್ನುತ್ತಾರವರು. ಇದನ್ನೂ ಓದಿ: ಇದು ಯುದ್ಧ ಮಾಡುವ ಹೊತ್ತಲ್ಲ
90 ದಿನದಲ್ಲಿ 120 ಕೋಟಿ ರೂ. ನಷ್ಟ: ರಾಜ್ಯದಲ್ಲಿ 615 ಏಕಪರದೆ ಚಿತ್ರಮಂದಿರಗಳಿವೆ. ಲಾಕ್ಡೌನ್ನಿಂದಾಗಿ ಅವಕ್ಕೆ ಬೀಗ ಜಡಿಯಲಾಗಿದೆ. ಅಲ್ಲಿಗೆ ಆದಾಯ ಕನಸಿನ ಮಾತು ಎನ್ನುತ್ತಾರೆ ಚಂದ್ರಶೇಖರ್. ಕಳೆದ 90 ದಿನಗಳಲ್ಲಿ ಪ್ರದರ್ಶಕರಿಗೆ 120 ಕೋಟಿ ರೂ.ಗೂ ಅಧಿಕ ನಷ್ಟ ಸಂಭವಿಸಿದೆ. ನಾವೇ 50 ರಿಂದ 60 ಕೋಟಿ ವ್ಯಯ ಮಾಡಿದ್ದೇವೆ. ಕೆಲಸಗಾರರ ಸಂಬಳ, ವಿದ್ಯುತ್ ಬಿಲ್, ತೆರಿಗೆ, ನೀರಿನ ಕರ ಮತ್ತಿತರ ಮೂಲಗಳಿಂದ ನಮ್ಮ ಕಡೆಯಿಂದ ಹೋಗಿದೆ. ಆದರೂ ಪ್ರದರ್ಶಕರ ಸ್ಥಿತಿಗತಿ ಬಗ್ಗೆ ಯಾರೂ ವಿಚಾರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ನಮ್ಮನ್ಯಾರೂ ಕೇಳುವವರಿಲ್ಲ
ಕಳೆದ ಮೂರು ತಿಂಗಳಿಂದ ಚಿತ್ರ ಪ್ರದರ್ಶಕರ ಸ್ಥಿತಿಗತಿ ಏನು ಎಂದು ಯಾರೂ ಕೇಳಿಲ್ಲ. ಈ ಬಗ್ಗೆ ಸರ್ಕಾರಗಳೂ ವಿಚಾರಿಸಿಲ್ಲ. ಇತ್ತೀಚೆಗೆ ಲಾಕ್ಡೌನ್ ಸಡಿಲ ಆಗಿದ್ದರಿಂದ ಆಯಾ ಕ್ಷೇತ್ರದ ಸಚಿವರು, ತಮ್ಮ ವಲಯಗಳ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಸಿನಿಮಾ ರಂಗದ ಬಗ್ಗೆ ರ್ಚಚಿಸಲು ನಮಗೆ ಮುಖ್ಯಮಂತ್ರಿಯೊಬ್ಬರೇ ಒಬ್ಬರೇ ಗತಿ. ಆದರೆ, ಇಡೀ ರಾಜ್ಯದ ಉಸ್ತುವಾರಿ ಅವರು ಹೊತ್ತಿದ್ದರಿಂದ, ಪದೇಪದೆ ಅವರ ಬಳಿ ಈ ವಿಚಾರ ಪ್ರಸ್ತಾಪಿಸಲು ಆಗದು. ಸಿನಿಮಾಕ್ಕೆ ಅಂತ ಒಬ್ಬ ಸರ್ಕಾರಿ ಅಧಿಕಾರಿಯನ್ನೂ ನೇಮಿಸಿಲ್ಲ. ಇನ್ನು ನಮ್ಮ ಸಿನಿಮಾದ ವಿವಿಧ ವಲಯಗಳೆಲ್ಲವೂ ಒಂದೆಡೆ ಸೇರಿ ರ್ಚಚಿಸುವ ಗೋಜಿಗೆ ಹೋಗಿಲ್ಲ’ ಎನ್ನುವ ಚಂದ್ರಶೇಖರ್, ಇನ್ನು ಮೇಲಾದರೂ ಈ ಬಗ್ಗೆ ಚರ್ಚೆಗಳು ನಡೆಯುತ್ತವಾ ಎಂಬ ನಿರೀಕ್ಷೆಯಲ್ಲಿದ್ದಾರೆ.
ಸಿನಿಮಾ ಶೂಟಿಂಗ್ ಸೇರಿ ಬಿಡುಗಡೆ ಬಗ್ಗೆ ಕಾರ್ಯಕಾರಿ ಸಮಿತಿ ಜತೆ ಚರ್ಚೆ ಮಾಡಲಿದ್ದೇವೆ. ಆ ಚರ್ಚೆ ಬಳಿಕ ಒಂದಷ್ಟು ಅಂಶಗಳನ್ನು ಸಿದ್ಧಪಡಿಸಿಕೊಂಡು, ಸಿಎಂ ಬಳಿ ತೆರಳಲಿದ್ದೇವೆ. ಅವರಿಂದ ಏನು ಉತ್ತರ ಬರುತ್ತದೆ ಎಂಬುದರ ಮೇಲೆ ಮುಂದಿನ ನಿರ್ಣಯ ತೆಗೆದುಕೊಳ್ಳಲಾಗುವುದು. | ಜೈರಾಜ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ
| ಮಂಜು