ಸಿನಿವಾಣಿ

ಹಾರಾಟದ ಹಿಂದಿದೆ ಹೋರಾಟ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಓವರ್ ದಿ ಟಾಪ್​ನಲ್ಲಿ (ಓಟಿಟಿ) ಕಳೆದ ಕೆಲವು ತಿಂಗಳುಗಳಲ್ಲಿ ಹಲವು ಹೊಸ ಸಿನಿಮಾಗಳು ಬಿಡುಗಡೆ ಆಗಿವೆ. ಸೂರ್ಯ ನಾಯಕನಾಗಿ ನಟಿಸಿರುವ ‘ಸೂರರೈ ಪೊಟ್ರು’ ಮಾತ್ರ ಇದಕ್ಕೊಂದು ಅಪವಾದ. ಈ ಚಿತ್ರ ಚರ್ಚೆಗೊಳಗಾಗುವುದರ ಜತೆಗೆ ಅಪಾರ ಜನಮನ್ನಣೆಯನ್ನೂ ಪಡೆದಿದೆ. ವಿಶೇಷವೆಂದರೆ, ಇದೊಂದು ತಮಿಳು ಚಿತ್ರವಾದರೂ, ಕಥೆ ಮಾತ್ರ ಕರುನಾಡಿನದ್ದು!

ಸಿನಿಮಾದ ಅಸಲಿ ಕಥೆ ಹಾಸನ ಮೂಲದ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಅವರದ್ದು. ‘ಏರ್ ಡೆಕ್ಕನ್’ ಎಂಬ ಕಡಿಮೆ ವೆಚ್ಚದ ವಿಮಾನಯಾನ ಸೇವೆ ಆರಂಭಿಸಿ, ಹಲವು ಹೊಸತುಗಳಿಗೆ ಗೋಪಿನಾಥ್ ಕಾರಣರಾಗಿದ್ದರು. ಆ ಏರಿಳಿತದ ಪ್ರಯಾಣವನ್ನು ‘ಸಿಂಪ್ಲಿ ಫ್ಲೈ; ಎ ಡೆಕ್ಕನ್ ಒಡಿಸ್ಸಿ’ ಎಂಬ ಪುಸ್ತಕದ ಮೂಲಕ 2011ರಲ್ಲಿ ಗೋಪಿನಾಥ್ ಬಿಚ್ಚಿಟ್ಟಿದ್ದರು. ಅದರಲ್ಲಿನ ಒಂದಷ್ಟು ಘಟನೆಗಳನ್ನು ಆಯ್ದುಕೊಂಡು, ಕಾಲ್ಪನಿಕ ಅಂಶಗಳನ್ನು ಮಿಶ್ರಣ ಮಾಡಿ ಸಿನಿಮಾ ಮಾಡಲಾಗಿದೆ.

ಸರಣಿ ಸೋಲು, ಹತಾಶೆ ಮತ್ತು ಎದುರಾಗುವ ಸವಾಲನ್ನು ಮೆಟ್ಟಿನಿಂತು ಸಾಮಾನ್ಯನಿಗೂ ವಿಮಾನ ಸೇವೆ ಕಲ್ಪಿಸಬೇಕೆಂಬ ಹೋರಾಟ ನೋಡುಗನನ್ನು ಕುತೂಹಲಕ್ಕೆ ದೂಡುತ್ತದೆ. ಈ ಚಿತ್ರವು ಅಮೇಜಾನ್ ಪ್ರೖೆಮ್ಲ್ಲಿ ಬಿಡುಗಡೆಯಾಗಿ ಜನರ ಮೆಚ್ಚುಗೆ ಪಡೆದಿದ್ದು, ಸ್ವತಃ ಕ್ಯಾಪ್ಟನ್ ಗೋಪಿನಾಥ್ ಅವರೇ ತಮ್ಮ ಕಥೆಯನ್ನು ಚಿತ್ರದಲ್ಲಿ ಬಹಳ ಚೆನ್ನಾಗಿ ಹಿಡಿದಿಡಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದು, ನಿರ್ದೇಶಕಿ ಸುಧಾ ಕೊಂಗರಾ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಇನ್ನು, ನಟ ಸೂರ್ಯ ಅವರು ಕ್ಯಾಪ್ಟನ್ ಗೋಪಿನಾಥ್ ಅವರನ್ನು ಹೋಲುವ ಪಾತ್ರದಲ್ಲಿ ನಟಿಸಿದ್ದು, ಅವರ ಪಾತ್ರ ಮತ್ತು ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಕನ್ನಡಿಗರೊಬ್ಬರ ಕಥೆ ಇರುವ ಈ ತಮಿಳು ಚಿತ್ರವು ಕನ್ನಡವಲ್ಲದೆ ತೆಲುಗು ಮತ್ತು ಹಿಂದಿಗೂ ಡಬ್ ಆಗಿದ್ದು, ಈ ಎಲ್ಲ ಚಿತ್ರಗಳು ಅಮೇಜಾನ್ ಪ್ರೖೆಮ್ಲ್ಲಿ ಲಭ್ಯ.

ಇವರು ಅವರಲ್ಲ...

‘ಸೂರರೈ ಪೊಟ್ರು’ ಚಿತ್ರದಲ್ಲಿ ಖ್ಯಾತ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರನ್ನು ಸರಿಯಾಗಿ ತೋರಿಸಿಲ್ಲ ಎಂಬಂತಹ ಬೇಸರದ ಅಭಿಪ್ರಾಯಗಳು ಕೆಲವೆಡೆ ವ್ಯಕ್ತವಾಗಿವೆ. ಕ್ಯಾಪ್ಟನ್ ಗೋಪಿನಾಥ್ ಅವರ ತಂದೆಯವರ ಹೆಸರು ರಾಮಸ್ವಾಮಿ ಅಯ್ಯಂಗಾರ್ ಎಂದೇ ಆದರೂ, ಅವರು ಸಾಹಿತಿಗಳಲ್ಲ. ಸ್ಕೂಲ್ ಮಾಸ್ಟರ್ ಆಗಿದ್ದ ಅವರ ಹೆಸರೂ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಆಗಿರುವುದರಿಂದ, ಖ್ಯಾತ ಹಿರಿಯ ಲೇಖಕ ಗೊರೂರು ಎಂದೇ ತಪ್ಪಾಗಿ ತಿಳಿದು ಕೊಂಡವರಿದ್ದಾರೆ. ಅದೇ ಕಾರಣಕ್ಕೆ ಆ ಪಾತ್ರವನ್ನು ಇನ್ನಷ್ಟು ಚೆನ್ನಾಗಿ ತೋರಿಸಬೇಕಿತ್ತು ಎಂಬ ಭಾವನೆ ವ್ಯಕ್ತವಾಗುತ್ತಿದೆ.