ಸಿನಿವಾಣಿ

'ಅಪ್ಪ ನೀನು ಆ ಪಕ್ಷಿಯನ್ನು ಕೊಲ್ಲಬಾರದಿತ್ತು'; ರಾಮಾಯಣ ನೋಡಿ ಯಶ್ ಪುತ್ರ ಹೇಳಿದ್ದು ಹೀಗಂತೆ..Yash

  • 'ಅಪ್ಪ ನೀನು ಪಕ್ಷಿಯನ್ನು ಕೊಲ್ಲಬಾರದಿತ್ತು, ಅದು ಸರಿಯಲ್ಲ' ಎಂದು ಯಥರ್ವ್​ ಕಣ್ಣೀರು ಹಾಕಿದ್ದ ಎಂದ ಯಶ್.

  • 'ಇಬ್ಬರು ಮಕ್ಕಳು ಥಿಯೇಟರ್​ನಲ್ಲಿ ನೋಡಿದ ಮೊದಲ ಸಿನಿಮಾ ಇದು, ಅವರ ಗುಣ ಕಂಡು ಹೆಮ್ಮೆಯಾಯಿತು' ಎಂದ ಯಶ್.

  • ಮಕ್ಕಳ ಗಮನಿಸುವಿಕೆ, ಅರ್ಥ ಮಾಡಿಕೊಳ್ಳುವಿಕೆಯೊಂದು ಭಾರಿ ಅದ್ಭುತ ಎಂದ ಸಾಯಿ ಪಲ್ಲವಿ.

Yash Ramayana: ನಿತೇಶ್ ತಿವಾರಿ ಆಕ್ಷನ್​ ಕಟ್ ಹೇಳಿರುವ 'ರಾಮಾಯಣ:ಭಾಗ 1' ಚಿತ್ರದ ಪ್ರೀಮಿಯರ್​ ಶೋ ಅಮೆರಿಕದ ಲಾಸ್​ ಏಂಜಲೀಸ್​ನಲ್ಲಿ ಆಯೋಜಿಸಲಾಗಿತ್ತು. ರಾಧಿಕಾ ಪಂಡಿತ್- ಯಶ್​ ಮಕ್ಕಳಾದ ಐರಾ ಮತ್ತು ಯಥರ್ವ್ ಮೊದಲ ಬಾರಿಗೆ ಥಿಯೇಟರ್‌ನಲ್ಲಿ ತಂದೆಯ ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡಿದ ನಂತರ ಮಕ್ಕಳು ಪ್ರಶ್ನೆಗಳ ಪಟ್ಟಿಯನ್ನೇ ಇಟ್ಟಿದ್ದ ಬಗ್ಗೆ ಯಶ್ ಮಾತನಾಡಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಹಿಂದೆ ತೆರೆಕಂಡಿದ್ದ 'ಟಾಕ್ಸಿಕ್' ಸಿನಿಮಾವನ್ನು ಯಶ್ ಮಕ್ಕಳೊಂದಿಗೆ ನೋಡಲು ಸಾಧ್ಯವಾಗಿರಲಿಲ್ಲ. ರಾಮಾಯಣ ಪೌರಾಣಿಕಾ ಸಿನಿಮಾ ಹಾಗೂ ಎಲ್ಲ ವಯಸ್ಸಿನ ಮಕ್ಕಳು ನೋಡಬಹುದಾಗಿದ್ದ ಕಾರಣ, ಲಾಸ್ ಏಂಜೆಲಾಸ್‌ನಲ್ಲಿ ಆಯೋಜಿಸಿದ್ದ ಪ್ರೀಮಿಯರ್ ಶೋನಲ್ಲಿ ಮಕ್ಕಳು ‘ರಾಮಾಯಣ' ವೀಕ್ಷಿಸಿ ಸಾಕಷ್ಟು ಪ್ರಶ್ನೆ ನನ್ನ ಮುಂದಿಟ್ಟರು. ನನಗೆ ಅವರ ಗಮನಿಸುವಿಕೆ, ಬೇರೆಯವರಿಗೆ ಹೇಗೆ ಗೌರವ ನೀಡಬೇಕು ಎನ್ನುವ ಗುಣ ನೋಡಿ ಹೆಮ್ಮೆಯಾಯಿತು ಎಂದು ಸಂದರ್ಶನವೊಂದರಲ್ಲಿ ಯಶ್ ಹೇಳಿದರು.

ನೀನು ಪಕ್ಷಿಯನ್ನು ಕೊಲ್ಲಬಾರದಿತ್ತು

"ನನಗೆ ಇಬ್ಬರು ಮಕ್ಕಳಿದ್ದಾರೆ. ಅವರಿಬ್ಬರು ಲಾಸ್ ಏಂಜಲೀಸ್‌ನಲ್ಲಿ ರಾಮಾಯಣ ಸಿನಿಮಾ ನೋಡಿದ ನಂತರ ನನ್ನ ಮುಂದೆ ಸಾವಿರಾರು ಪ್ರಶ್ನೆಗಳನ್ನು ಇಟ್ಟರು. ಅವರ ಜೀವನ ಈಗಷ್ಟೇ ಶುರುವಾಗುತ್ತಿದೆ. ಅವರು ಸಿನಿಮಾವನ್ನು ಅರ್ಥ ಮಾಡಿಕೊಂಡ ರೀತಿ, ಹೇಗೆ ಬೇರೆಯವರೊಂದಿಗೆ ವರ್ತಿಸಬೇಕು, ಹೇಗೆ ಗೌರವ ನೀಡಬೇಕು ಎನ್ನುವುದನ್ನು ಈಗಲೇ ತಿಳಿದುಕೊಂಡಿದ್ದಾರೆ. ನಾನು ನನ್ನ ಮಗನನ್ನು ನೋಡಿ ನಿಜವಾಗಲೂ ಖುಷಿ ಪಟ್ಟಿದ್ದೇನೆ. ಇದು ನನಗೆ ಹೆಮ್ಮೆಯ ಕ್ಷಣ" ಎಂದು ಯಶ್ ಮಾತನಾಡಿದರು.

ಮಕ್ಕಳು ಅದ್ಭುತ

ಇದೇ ವೇಳೆ ಮಾತು ಮುಂದುವರಿಸಿದ ಸಾಯಿ ಪಲ್ಲವಿ, "ನಾವು ಸಿನಿಮಾ ನೋಡಿ ಹೊರಬಂದಾಗ ಯಥರ್ವ್ ತುಂಬಾ ಅಳುತ್ತಿರುವುದನ್ನು ನೋಡಿದೆ. ಯಾಕೆ ಅಂತ ಕೇಳಿದಾಗ, 'ಅಪ್ಪ ನೀನು ಆ ಪಕ್ಷಿ (ಜಟಾಯು)ಯನ್ನು ಕೊಂದಿದ್ದು ನನಗೆ ಇಷ್ಟವಾಗಲಿಲ್ಲ' ಎಂದ. ಅವನಿಗೆ ಅದು ಅವನ ಅಪ್ಪ (ಯಶ್) ಎಂದು ಗೊತ್ತು. ಅದು ಬರಿ ನಟನೆ ಅಷ್ಟೇ ಎಂದು ಎಷ್ಟೇ ಸಮಾಧಾನ ಮಾಡಿದರೂ 'ಇಲ್ಲ, ಅದು ಸರಿಯಲ್ಲ, ನನಗೆ ಇಷ್ಟವಾಗಲಿಲ್ಲ, ನೀನು ಹಾಗೆ ಮಾಡಬಾರದಿತ್ತು' ಎಂದ. ಮಕ್ಕಳು ಗಮನಿಸುವ ರೀತಿ ನಿಜಕ್ಕೂ ಅದ್ಭುತವಾದ ಅನುಭವ" ಎಂದರು ಸಾಯಿ ಪಲ್ಲವಿ.

ಥಿಯೇಟರ್‌ನಲ್ಲಿ ಮೊದಲ ಸಿನಿಮಾ ನೋಡಿದ ಐರಾ, ಯಥರ್ವ್ ಹೇಗೆ ಆನಂದಿಸಿದರು. ಎಷ್ಟೆಲ್ಲ ತಿಳಿದುಕೊಂಡರು ಎನ್ನುವ ಬಗ್ಗೆ ಯಶ್​​​ ಮಾತನಾಡಿರುವುದು ಅಭಿಮಾನಿಗಳಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ನಮಿತ್ ಮಲ್ಲೋತ್ರಾ ನಿರ್ಮಾಣದ 'ರಾಮಾಯಣ ಭಾಗ: 1' ಚಿತ್ರದಲ್ಲಿ ನಟರಾದ ರಣಬೀರ್ ಕಪೂರ್, ಯಶ್, ಸನ್ನಿ ಡಿಯೋಲ್, ಸಾಯಿ ಪಲ್ಲವಿ, ರಕುಲ್ ಪ್ರೀತ್ ಸಿಂಗ್, ಲಾರಾ ದತ್ ಅಭಿನಯಿಸಿದ್ದಾರೆ. ಇದೇ ನ. 5ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಈಗಾಗಲೇ ದೇಶದಲ್ಲಿ 3 ಲಕ್ಷಕ್ಕೂ ಅಧಿಕ ಮುಂಗಡ ಟಿಕೆಟ್‌ಗಳು ಮಾರಾಟವಾಗಿವೆ, (ಏಜೆನ್ಸೀಸ್).