ಸಿನಿವಾಣಿ

ಫಲಿಸಿತು ಅಭಿಮಾನಿಗಳ ಪ್ರಾರ್ಥನೆ: ಶಿವಣ್ಣನಿಗೆ ಸರ್ಜರಿ ಯಶಸ್ವಿ, ವೈದ್ಯರು ಹೇಳಿದ್ದಿಷ್ಟು... Shiva Rajkumar

Shiva Rajkumar  : ಅನಾರೋಗ್ಯ ಹಿನ್ನೆಲೆಯಲ್ಲಿ ಸರ್ಜರಿಗೆಂದು ಅಮೆರಿಕಕ್ಕೆ ತೆರಳಿರುವ ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್​ ಅವರ ಆರೋಗ್ಯದ ಕುರಿತು ಮಹತ್ವದ ಮಾಹಿತಿ ಹೊರಬಿದ್ದಿದೆ. ಇತ್ತೀಚೆಗೆ ನಡೆದ ಶಸ್ತ್ರಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದ್ದು, ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಸಿಹಿ ಸುದ್ದಿ ಅಭಿಮಾನಿಗಳಿಗೆ ಸಿಕ್ಕಿದೆ.

ಶಿವಣ್ಣ ಅವರ ಸರ್ಜರಿ ಯಶಸ್ವಿಯಾಗಲಿ ಮತ್ತು ಆದಷ್ಟು ಬೇಗ ಗುಣಮುಖರಾಗಿ ಬರಲೆಂದು ಅಭಿಮಾನಿಗಳು ಸಲ್ಲಿಸಿದ ಪ್ರಾರ್ಥನೆಗೆ ಫಲ ಸಿಕ್ಕಿದೆ. ರಾಜ್ಯಾದ್ಯಂತ ಶಿವಣ್ಣನ ಅಭಿಮಾನಿಗಳು ವಿವಿಧ ದೇವಸ್ಥಾನಗಳಲ್ಲಿ ಹೋಮ, ಹವನ ಮಾಡಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ಅವರ ಪ್ರಾರ್ಥನೆಗೆ ಫಲ ಸಕ್ಕಿದೆ. ಶಿವಣ್ಣನಿಗೆ ಸರ್ಜರಿ ಯಶಸ್ವಿಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಅಮೆರಿಕದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ವೈದ್ಯರಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.

ಈ ಶಸ್ತ್ರಚಿಕಿತ್ಸೆಯನ್ನು ಡಾ. ಮುರುಗೇಶ ಮನೋಹರನ್ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು. ಶಸ್ತ್ರಚಿಕಿತ್ಸೆಯ ವೇಳೆ ಮತ್ತು ಶಸ್ತ್ರಚಿಕಿತ್ಸೆ ನಂತರದ ಆರೈಕೆ ಸಮಯದಲ್ಲಿ ಶಿವರಾಜ್‌ಕುಮಾರ್ ಅವರ ಆರೋಗ್ಯ ಸ್ಥಿತಿಯು ಸ್ಥಿರವಾಗಿತ್ತು ಎಂದು ಮುರುಗೇಶ ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಶಿವಣ್ಣನ ಚೇತರಿಕೆಯನ್ನು ಖಚಿತಪಡಿಸಲು ಪ್ರಸ್ತುತ ಅವರನ್ನು ತೀವ್ರ ನಿಗಾದಲ್ಲಿ ಇಡಲಾಗಿದೆ. ಪರಿಣತ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳ ತಂಡ ಶಿವಣ್ಣನ ಆರೈಕೆಯನ್ನು ನೋಡಿಕೊಳ್ಳುತ್ತಿದೆ.

ಅಭಿಮಾನಿಗಳು, ಸಹೋದ್ಯೋಗಿಗಳು ಮತ್ತು ಮಾಧ್ಯಮಗಳು ತೋರಿಸಿದ ನಿರಂತರ ಬೆಂಬಲ ಹಾಗೂ ಪ್ರಾರ್ಥನೆಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ. ನಿಮ್ಮ ಪ್ರೋತ್ಸಾಹ ಶಿವರಾಜ್‌ಕುಮಾರ್ ಮತ್ತು ಅವರ ಕುಟುಂಬಕ್ಕೆ ದೊಡ್ಡ ಶಕ್ತಿ ಒದಗಿಸಿದೆ. ಅವರ ಚೇತರಿಕೆ ಕುರಿತು ಮುಂದಿನ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಹಂಚಿಕೊಳ್ಳಲಾಗುವುದು. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದು ಶಿವಣ್ಣನ ಜತೆ ತೆರಳಿರುವ ಪತ್ನಿ ಗೀತಾ ಮತ್ತು ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.

ಸದ್ಯ ವಿಶ್ರಾಂತಿಯಲ್ಲಿರುವ ಶಿವಣ್ಣ ಇನ್ನು ನಾಲ್ಕು ದಿನದಲ್ಲಿ ನಿಮ್ಮ ಜೊತೆ ಮಾತನಾಡಲಿದ್ದಾರೆ ಎಂದು ಗೀತಾ ಶಿವರಾಜ್​ಕುಮಾರ್ ಅವರು ತಿಳಿಸಿದ್ದಾರೆ.