ಸಿನಿವಾಣಿ

VIDEO: ‘ಫಾರ್​ಎವರ್​ ಆರ್​ಸಿಬಿ’ಗೆ ತಾರೆಯರ ಜೈಕಾರ; ಇಲ್ಲಿದೆ ನೋಡಿ ಮನ ಕುಣಿಸೋ ಹಾಡು...

manjunathktgns

ಬೆಂಗಳೂರು: ಅರಬ್ಬರ ನಾಡಿನಲ್ಲಿ ಐಪಿಎಲ್​ ಹವಾ ಶುರುವಾಗಿದೆ. ಇತ್ತ ಕರ್ನಾಟಕದಲ್ಲಿ ಆರ್​ಸಿಬಿ ಕ್ರೇಜ್​ ಹೆಚ್ಚಾಗಿದೆ. ಸೋಷಿಯಲ್​ ಮೀಡಿಯಾದಲ್ಲಂತೂ ಬಗೆಬಗೆ ರೀತಿಯಲ್ಲಿ ಆರ್​ಸಿಬಿ ಕುರಿತ 'ಈ ಸಲ ಕಪ್​ ನಮ್ದೆ' ಎಂಬ ಘೋಷವಾಕ್ಯಗಳು ಮೊಳಗುತ್ತಿವೆ. ಜತೆಗೆ ಆರ್​ಸಿಬಿ ಅಭಿಮಾನಿಗಳು ಹಾಡುಗಳ ಮೂಲಕವೂ ರಂಜಿಸುತ್ತಿದ್ದಾರೆ. ಇದೀಗ ಈ ವರ್ಷವೂ ಅಂಥದ್ದೇ ಮನ ಕುಣಿಸೋ ಮತ್ತು ಮನ ತಣಿಸೋ ಹಾಡೊಂದು ಬಿಡುಗಡೆ ಆಗಿದೆ.

ಟ್ರೋಲ್​ ಹೈದ ಟೀಮ್​ ಕಡೆಯಿಂದ ಸಿದ್ಧವಾದ ಈ ಹಾಡು ಸದ್ಯ ಯೂಟ್ಯೂಬ್​ನಲ್ಲಿ ಕ್ರೇಜ್​ ಸೃಷ್ಟಿಸಿದೆ. ‘ಫಾರ್​ಎವರ್​ ಆರ್​ಸಿಬಿ’ ಎಂಬ ಶೀರ್ಷಿಕೆಯಡಿ ಮೂಡಿಬಂದಿರುವ ಈ ಹಾಡಿನಲ್ಲಿ ಸ್ಯಾಂಡಲ್​ವುಡ್​ ತಾರೆಯರು ಹಾಡಿಗೆ ಹೆಜ್ಜೆಹಾಕಿದ್ದಾರೆ. ಮನಃತುಂಬಿ ಹಾಡಿ ಕುಣಿದಿದ್ದಾರೆ.

‘ಅಣು ಅಣುವಲು ಆರ್​ಸಿಬಿ.. ಕಣಕಣದಲ್ಲೂ ಆರ್​ಸಿಬಿ... ಮನಮನದಲ್ಲೂ ಆರ್​ಸಿಬಿ...’ ಎಂದು ಶುರುವಾಗುವ ಹಾಡಿನಲ್ಲಿ, ವಿಜಯ್ ರಾಘವೇಂದ್ರ, ಪ್ರಣೀತಾ ಸುಭಾಷ್​, ಅದಿತಿ ಪ್ರಭುದೇವ, ಎಂ.ಜಿ ಶ್ರೀನಿವಾಸ್​, ವಿಕ್ಕಿ ವರುಣ್​, ಸಂಜನಾ ಆನಂದ್​, ಪ್ರಭು ಮುಂಡ್ಕೂರ್​, ಅಮೃತಾ ಅಯ್ಯಂಗಾರ್, ಸಪ್ತಮಿ ಗೌಡ ಹಾಡಿನಲ್ಲಿ ಕಾಣಿಸಿಕೊಂಡು, ಆರ್​ಸಿಬಿ ಅಭಿಮಾನಿಗಳಿಗೆ ಜೋಶ್​ ತುಂಬಿದ್ದಾರೆ.

ಬರೀ ಸಿನಿಮಾ ಮಂದಿಯಷ್ಟೇ ಅಲ್ಲ, ಕರೊನಾ ವಾರಿಯರ್ಸ್​ಗಳೂ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್​ ಇಲಾಖೆ, ಪೌರಕಾರ್ಮಿಕರು ಸಹ ಹಾಡಿನಲ್ಲಿ ಆರ್​ಸಿಬಿ ಅಭಿಮಾನಿಗಳಿಗೆ ಜೋಶ್​ ನೀಡಿದ್ದಾರೆ. ಇನ್ನು ತಾಂತ್ರಿಕ ವರ್ಗದ ಬಗ್ಗೆ ನೋಡುವುದಾದರೆ, ಅನಿರುದ್ಧ ಶಾಸ್ತ್ರಿ, ಮೈತ್ರಿ ಅಯ್ಯರ್​, ಮದ್ವೇಶ್​ ಭಾರದ್ವಾಜ್​ ಹಾಡಿಗೆ ಧ್ವನಿ ನೀಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಮತ್ತು ಕ್ರಿಯೇಟಿವ್​ ಮುಖ್ಯಸ್ಥರಾಗಿ ನಯನ್​ ತೆಮ್ಕರ್​ ಕೆಲಸ ಮಾಡಿದ್ದಾರೆ.

ಒಟ್ಟು ಎರಡೇ ದಿನದಲ್ಲಿ ಈ ಹಾಡನ್ನು ಕ್ಯಾಮರಾದಲ್ಲಿ ಸೆರೆ ಹಿಡಿದವರು ಉದಯ್​ ಲೀಲಾ. ಹಾಡಿಗೆ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ ಅನಿರುದ್ಧ ಶಾಸ್ತ್ರಿ. ಸಾಗರ್​ ಮಹದೇವ್​ ಸಂಕಲನ ಮತ್ತು ವಿಎಫ್​ಎಕ್ಸ್ ನಿರ್ವಹಿಸಿದ್ದಾರೆ. ನೃತ್ಯ ನಿರ್ದೇಶನ ಮಾಡಿದ್ದಾರೆ ಮಾಧುರಿ ಪರಶುರಾಮ್​.