ಮುಂಬೈ: ಶುಕ್ರವಾರ(ನ.26) ಬಿಡುಗಡೆಯಾದ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ರ ಹೊಸ ಚಿತ್ರ 'ಅಂತಿಮ್' ಸಿನಿಮಾಪ್ರಿಯರಲ್ಲಿ ಸಂಚಲನ ಮೂಡಿಸಿದೆ. ತೆರೆಕಂಡ ಎರಡೇ ದಿನಗಳಲ್ಲಿ ಅದಾಗಲೇ 10 ಕೋಟಿ ರೂಪಾಯಿ ಸಂಪಾದನೆ ಮಾಡಿದೆ. ಈ ಚಿತ್ರದಲ್ಲಿ ಸಿಖ್ ಪೊಲೀಸ್ ಅಧಿಕಾರಿಯ ಪಾತ್ರ ವಹಿಸಿರುವ ಸಲ್ಮಾನ್ ಜೊತೆಗೆ ಅವರ ಬಾಮೈದ ಯುವ ನಟ ಆಯುಷ್ ಶರ್ಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅಂತಿಮ್ ವೀಕ್ಷಣೆಗೆ ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿರುವ ಸಲ್ಮಾನ್ರ ಅಭಿಮಾನಿಗಳು ಸಿನಿಮಾ ಮಂದಿರದ ಒಳಗೇ ಪಟಾಕಿಗಳನ್ನು ಸಿಡಿಸಿ ಸಂಭ್ರಮ ಆಚರಿಸಿರುವ ವಿಡಿಯೋ ಒಂದನ್ನು ಸಲ್ಮಾನ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಆದರೆ ಸಲ್ಮಾನ್ ಈ ಬಗ್ಗೆ ಸಂತಸಪಟ್ಟಿಲ್ಲ, ಬದಲಿಗೆ ಈ ರೀತಿ ಥಿಯೇಟರ್ ಒಳಗೆ ಪಟಾಕಿ ಹೊಡೆಯುವುದು ಎಲ್ಲರ ಜೀವಕ್ಕೂ ಕುತ್ತು ತರುವಂಥದ್ದು ಎಂದು ಎಚ್ಚರಿಸಿದ್ದಾರೆ.
"ನನ್ನ ಎಲ್ಲಾ ಅಭಿಮಾನಿಗಳಿಗೆ ನಾನು ಮನವಿ ಮಾಡುತ್ತೇನೆ... ಆಡಿಟೋರಿಯಂ ಒಳಗೆ ಪಟಾಕಿಗಳನ್ನು ತೆಗೆದುಕೊಂಡು ಹೋಗಬೇಡಿ. ಇದರಿಂದ ನೀವು ನಿಮ್ಮ ಮತ್ತು ಇತರರ ಜೀವಕ್ಕೆ ದೊಡ್ಡ ಅಪಾಯ ತರುತ್ತಿದ್ದೀರಿ. ಥಿಯೇಟರ್ ಮಾಲಿಕರಿಗೆ ಪಟಾಕಿಯನ್ನು ಒಳಕ್ಕೆ ಬಿಡಬೇಡಿ ಎಂದು ಕೇಳಿಕೊಳ್ಳುತ್ತೇನೆ. ಪ್ರವೇಶದಲ್ಲೇ ಸೆಕ್ಯುರಿಟಿ ಇದನ್ನು ತಡೆಯಬೇಕು. ಚಿತ್ರವನ್ನು ಎಂಜಾಯ್ ಮಾಡಿ, ಆದರೆ ಪ್ಲೀಸ್ ಪ್ಲೀಸ್ ಈ ರೀತಿ ಮಾಡಬೇಡಿ" ಎಂದು ಸಲ್ಲೂ ಭಾಯ್ ಕೇಳಿಕೊಂಡಿದ್ದಾರೆ. (ಏಜೆನ್ಸೀಸ್)