Sai Pallavi : ನಟಿ ಸಾಯಿ ಪಲ್ಲವಿ ಮಾಲಿವುಡ್‌ನಲ್ಲಿ ನಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ತಮ್ಮ ಮೊದಲ ಚಿತ್ರ ಪ್ರೇಮಂ ಭರ್ಜರಿ ಯಶಸ್ಸು ಕೊಂಡಿತು. ಮೊದಲ ಸಿನಿಮಾದಲ್ಲೇ ನಟಿಯಾಗಿ ನಟನೆಯಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿದ ನಂತರ, ತೆಲುಗು ಹಾಗೂ ತಮಿಳಿನಲ್ಲಿ ಅವಕಾಶಗಳ ಸುರಿಮಳೆಯೇ ಆಯಿತು. ಇತ್ತೀಚೆಗೆ ಹಿಂದಿ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ.
ಸಾಮಾನ್ಯವಾಗಿ, ನಟಿಯರು ಒಂದೇ ಒಂದು ಅವಕಾಶ ಸಿಗಲಿ ಅಂತ ಕಾಯುತ್ತಾರೆ. ಆದರೆ, ಸಾಯಿ ಪಲ್ಲವಿಗಾಗಿ ಅವಕಾಶಗಳೇ ಕಾಯುತ್ತವೆ. ಏಕೆಂದರೆ, ಅವರು ಸರ್ವತೋಮುಖ ಪಾತ್ರಗಳಲ್ಲಿ ನಟಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಚಿತ್ರ ಎಷ್ಟೇ ದೊಡ್ಡದಾಗಿದ್ದರೂ ಅಥವಾ ಚಿತ್ರ ಎಷ್ಟೇ ತಾರಾಬಳಗವನ್ನು ಹೊಂದಿದ್ದರು ಸಹ ಕಥೆಯಲ್ಲಿ ತನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇದೆಯೇ ಮತ್ತು ಅದರಲ್ಲಿ ನಟಿಸಲು ಅವಕಾಶವಿದೆಯೇ ಎಂದು ಯೋಚಿಸುವ ನಟಿಯರಲ್ಲಿ ಸಾಯಿ ಪಲ್ಲವಿ ಯಾವಾಗಲು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ.
ಮಣಿರತ್ನಂ ಅವರಂತಹ ಸ್ಟಾರ್ ನಿರ್ದೇಶಕರು ಕೂಡ ಸಾಯಿ ಪಲ್ಲವಿ ಜೊತೆ ಸಿನಿಮಾ ಮಾಡುವ ಆಸಕ್ತಿಯನ್ನು ವ್ಯಕ್ತಪಡಿಸುತ್ತಾರೆಂದರೆ ಆಕೆಯ ಪ್ರತಿಭೆ ಎಂಥದ್ದು ಎಂಬುದು ಗೊತ್ತಾಗುತ್ತದೆ. ಇತ್ತೀಚೆಗೆ, ಶಿವಕಾರ್ತಿಕೇಯನ್ ಎದುರು ಸಾಯಿ ಪಲ್ಲವಿ ನಟಿಸಿದ ಅಮರನ್ ಚಿತ್ರವು ಬ್ಲಾಕ್ಬಸ್ಟರ್ ಹಿಟ್ ಆಯಿತು. ಅದರಲ್ಲೂ ಇಡೀ ಚಿತ್ರದಲ್ಲಿ ನಾಯಕನಿಗಿಂತ ಹೆಚ್ಚು ಗಮನ ಸೆಳೆಯುವುದೇ ನಾಯಕಿ ಸಾಯಿ ಪಲ್ಲವಿ. ಸಿನಿಮಾ ನೋಡಿದ ಪ್ರತಿಯೊಬ್ಬರು ಸಾಯಿ ಪಲ್ಲವಿ ಅಭಿನಯವನ್ನು ಕೊಂಡಾಡಿದರು.
ಅದೇ ರೀತಿ, ನಾಗ ಚೈತನ್ಯ ಎದುರು ನಟಿಸಿದ ಥಂಡೇಲ್ ಚಿತ್ರವು ಕೂಡ ಉತ್ತಮ ಯಶಸ್ಸನ್ನು ಕಂಡಿತು. ಪ್ರಸ್ತುತ ಹಿಂದಿಯಲ್ಲಿ ತಯಾರಾಗುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ರಾಮಾಯಣದಲ್ಲಿ ಸೀತೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ, ಒಂದು ಕಾರ್ಯಕ್ರಮದಲ್ಲಿ ಪ್ರಶಸ್ತಿಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಸಾಯಿ ಪಲ್ಲವಿ, ಅಭಿಮಾನಿಗಳ ಪ್ರೀತಿ ತನಗೆ ಪ್ರಶಸ್ತಿಗಳಿಗಿಂತ ತುಂಬಾ ಮುಖ್ಯ ಎಂದರು.
ಪ್ರೇಕ್ಷಕರು ನಮ್ಮ ಪಾತ್ರಗಳನ್ನು ಚಿತ್ರಮಂದಿರಗಳಲ್ಲಿ ನೋಡಿ ಭಾವನೆಗಳಲ್ಲಿ ಮುಳುಗಿದರೆ ಅದನ್ನು ದೊಡ್ಡ ಯಶಸ್ಸು ಎಂದು ಪರಿಗಣಿಸುವುದಾಗಿ ಸಾಯಿ ಪಲ್ಲವಿ ಹೇಳಿದರು. ಪಾತ್ರಗಳ ಮೂಲಕ ಸತ್ಯವನ್ನು ಹೇಳುವ ಪಾತ್ರಗಳನ್ನು ನಾನು ಯಾವಾಗಲೂ ಬಯಸುತ್ತೇನೆ. ಪ್ರೇಕ್ಷಕರು ಆ ಪಾತ್ರಗಳ ಭಾವನೆಗಳಿಗೆ ನಾನು ಭಾವಿಸಿದಂತೆ ಕನೆಕ್ಟ್ ಆದರೆ, ಅದೇ ದೊಡ್ಡ ಯಶಸ್ಸು ಎಂದು ಪರಿಗಣಿಸುತ್ತೇನೆಂದು ಸಾಯಿ ಪಲ್ಲವಿ ಹೇಳಿದರು.
ನನಗೆ ಪ್ರಶಸ್ತಿಗಳಿಗಿಂತ ಅಭಿಮಾನಿಗಳ ಪ್ರೀತಿ ಮತ್ತು ಮೆಚ್ಚುಗೆಯೇ ದೊಡ್ಡದು. ಅಭಿಮಾನಿಗಳಿಗಿಂತ ದೊಡ್ಡ ಪ್ರಶಸ್ತಿಗಳಿಲ್ಲ. ನನಗೆ ನನ್ನ ಅಭಿಮಾನಿಗಳೇ ಮುಖ್ಯ ಎಂದು ಸಾಯಿ ಪಲ್ಲವಿ ಅವರು ಹೇಳಿದರು. ಅಭಿಮಾನಿಗಳ ಪ್ರೀತಿ ಮತ್ತು ಮೆಚ್ಚುಗೆಯನ್ನು ಗಳಿಸುವುದಕ್ಕೆ ನಾನು ಮೊದಲು ಆದ್ಯತೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು. (ಏಜೆನ್ಸೀಸ್)