ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಮೇಲಿಂದ ಮೇಲೆ ಕರೊನಾ ಆಘಾತ ಎದುರಾಗುತ್ತಿದ್ದು, ನಿರ್ಮಾಪಕರ ವಲಯದಿಂದ ಇದೀಗ ಮತ್ತೊಬ್ಬರು ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ. ಕೆಲವೇ ದಿನಗಳ ಹಿಂದೆ ನಿರ್ಮಾಪಕ ಕೋಟಿ ರಾಮು ಅವರನ್ನು ಕಳೆದುಕೊಂಡಿದ್ದ ಚಿತ್ರರಂಗ, ಅದರ ಬೆನ್ನಿಗೇ ಮತ್ತೊಬ್ಬ ನಿರ್ಮಾಪಕ ಚಂದ್ರಶೇಖರ್ ಅವರನ್ನು ಕಳೆದುಕೊಂಡಿತ್ತು. ಇದೀಗ ಕಾರ್ಯಕಾರಿ ನಿರ್ಮಾಪಕರೊಬ್ಬರು ಕರೊನಾದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಕಾರ್ಯಕಾರಿ ನಿರ್ಮಾಪಕ ರಾಜಶೇಖರ್ ಮೃತಪಟ್ಟವರು. ವಿಜಯಪ್ರಸಾದ್ ನಿರ್ದೇಶನದಲ್ಲಿ ನೀನಾಸಂ ಸತೀಶ್, ಹರಿಪ್ರಿಯಾ ಅಭಿನಯಿಸಿರುವ, ಇನ್ನಷ್ಟೇ ಬಿಡುಗಡೆ ಆಗಬೇಕಿರುವ ʼಪೆಟ್ರೋಮ್ಯಾಕ್ಸ್ʼ ಚಿತ್ರಕ್ಕೆ ಇವರು ಕಾರ್ಯಕಾರಿ ನಿರ್ಮಾಪಕರಾಗಿದ್ದರು. ಅಲ್ಲದೆ ದುನಿಯಾ ಸೂರಿ ನಿರ್ದೇಶದನ ʼಪಾಪ್‌ಕಾರ್ನ್ ಮಂಕಿಟೈಗರ್ʼ ಚಿತ್ರತಂಡದಲ್ಲೂ ಕಾರ್ಯನಿರ್ವಹಿಸಿದ್ದರು. ಕೋವಿಡ್ ಸೋಂಕಿತರಾಗಿದ್ದ ಇವರು ಇಂದು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ.
"ರಾಜು ಕನ್ನಡ ಚಿತ್ರರಂಗದಲ್ಲಿ ಬದುಕು ಕಟ್ಟುವ ಹಂತದಲ್ಲಿದ್ದ ಮಹಾತ್ವಾಕಾಂಕ್ಷಿ. ನಮ್ಮ ʼಪೆಟ್ರೋಮ್ಯಾಕ್ಸ್ʼ ಚಿತ್ರ ಆಗಲು ಮುಖ್ಯವಾದ ವ್ಯಕ್ತಿ. ಜಗಳ-ಪ್ರೀತಿ ಎಲ್ಲವೂ ಇತ್ತು. ನಮ್ಮ ಜೊತೆ ಕಾರ್ಯಕಾರಿ ನಿರ್ಮಾಪಕರಾಗಿ 2 ತಿಂಗಳು ಜೊತೆಗಿದ್ದರು. ʼಪೆಟ್ರೋಮ್ಯಾಕ್ಸ್ʼ ಗೆದ್ದು ಅದರ ಅದ್ದೂರಿ ಸಮಾರಂಭ ಮಾಡುವ ಆಸೆ ಹೊತ್ತಿದ್ದರು. ಯಾವಾಗಲೂ ನಗುತ್ತ ಸೆಟ್‌ನಲ್ಲಿ ಕೂತಿರುತ್ತಿದ್ದ ನೆನಪುಗಳನ್ನು ನೆನಪಿಸಿಕೊಂಡರೆ ಎದೆಗೆ ಭರ್ಜಿ ಚುಚ್ಚಿದಂತಾಗುತ್ತದೆ. ಮೈಸೂರಿನಲ್ಲಿ ರಾತ್ರಿಯೆಲ್ಲ ಜೊತೆಗಿದ್ದು ಕಾರು ಹತ್ತಿಸಿ ನಾವು ಗೆಲ್ತೀವಿ, ನಡೀರಿ ಸಾರ್ ನೆಮ್ಮದಿಯಾಗಿ ನಿದ್ದೆ ಮಾಡಿ ಎಂದು ಚಿರನಿದ್ರೆಗೆ ಜಾರಿದ "ರಾಜು", ಇದು ತಪ್ಪಲ್ಲವೇ..?" ಎಂದು ನಟ ನೀನಾಸಂ ಸತೀಶ್ ಸಂತಾಪ ಸೂಚಿಸಿ ದುಃಖ ವ್ಯಕ್ತಪಡಿಸಿದ್ದಾರೆ.