ಬೆಂಗಳೂರು: ‘ಮನೆಯ ರಸ್ತೆ, ಮೊಬೈಲ್ ಫೋನ್, ಎಟಿಎಂ ಪಿನ್ಕೋಡ್ ಎಲ್ಲವೂ ಮರೆತು ಹೋಗಿದೆ. ಟೋಟಲಿ ಬ್ಲ್ಯಾಂಕ್ ಆಗಿದ್ದೇನೆ..’ ಎನ್ನುತ್ತ ‘ಬಿಗ್ಬಾಸ್ ಸೀಸನ್ 7’ರ ಅನುಭವ ಹೇಳಿಕೊಂಡಿದ್ದಾರೆ ಈ ವಾರವಷ್ಟೇ ಎಲಿಮಿನೇಟ್ ಆಗಿರುವ ನಟಿ, ಗಾಯಕಿ ಚಂದನಾ ಅನಂತಕೃಷ್ಣ.
‘ನಾನು ನಾಲ್ಕು ವಾರವಷ್ಟೇ ಅಲ್ಲಿರಬಹುದು ಎಂದುಕೊಂಡಿದ್ದೆ. ಆದರೆ 50 ದಿನಗಳ ಬಳಿಕ ಟಾಪ್ 5ನಲ್ಲಿ ಇರಬೇಕು ಅಂದುಕೊಂಡೆ. ಈಗ 84 ದಿನಗಳು ಬೇಗ ಕಳೆದುಹೋಯಿತು ಅನಿಸುತ್ತದೆ’ ಎನ್ನುತ್ತಾರೆ ಚಂದನಾ. ಹಾಗಂತ ಬಿಗ್ಬಾಸ್ನಲ್ಲಿ ಬರೀ ಖುಷಿಯನ್ನೇ ಅನುಭವಿಸಲಿಲ್ಲ. ಕೆಲವರಿಂದ ಬೇಸರ ಕೂಡ ಆಯಿತು ಎನ್ನುವ ಚಂದನಾ, ಆ ಕುರಿತು ಇಬ್ಬರ ಹೆಸರನ್ನು ಉಲ್ಲೇಖಿಸುತ್ತಾರೆ. ‘ಶೈನ್ ಶೆಟ್ಟಿ ಮತ್ತು ವಾಸುಕಿ ವೈಭವ್ ಜತೆ ಒಳ್ಳೆಯ ಬಾಂಡಿಂಗ್ ಇತ್ತು. ಆದರೆ ಕಿಶನ್ ಮತ್ತು ಹರೀಶ್ ನನಗೆ ತುಂಬ ಬೇಸರ ಮಾಡಿದರು’ ಎನ್ನುತ್ತಾರೆ ಅವರು. ಹಾಗೆಯೇ ಹರೀಶ್ ರಾಜ್ ಕಪಾಳಕ್ಕೆ ಹೊಡೆದ ಬಗ್ಗೆ ತಮ್ಮ ಮೇಲೇ ಬೇಸರ ಆಯಿತು ಎಂದೂ ಹೇಳಿಕೊಂಡಿದ್ದಾರೆ. ‘ಮನಸಿನಲ್ಲಿ ಇದ್ದಿದ್ದನ್ನು ಹೇಳಿದಾಗ ಹರೀಶ್ಗೆ ಸಿಲ್ಲಿ ಎನಿಸಿತು. ಅದನ್ನು ಹೇಳಿದ ಮೇಲೂ ಅವರು ಸ್ವೀಕರಿಸಲಿಲ್ಲ. ಆದರೆ ತಾವು ಹೇಳಿದ್ದೇ ಸರಿ ಎನ್ನುತ್ತಿದ್ದರು’ ಎಂದು ಬೇಸರ ಉಂಟಾಗಲು ಇದ್ದ ಕಾರಣವನ್ನೂ ತಿಳಿಸಿದರು. ಇನ್ನು ತಮ್ಮ ಕ್ಯಾಪ್ಟನ್ಸಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಅವರು, ಆ ಸಂದರ್ಭದಲ್ಲಿ ಶೈನ್ ಮತ್ತು ಕಿಶನ್ ನಡುವಿನ ಕೋಲಾಟದ ಒಂದು ಟಾಸ್ಕ್ನಲ್ಲಿ ತಪ್ಪಾಗಿ ಡಿಸಿಷನ್ ಕೊಟ್ಟ ಬಗ್ಗೆಯೂ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.
ಈ ಬಿಗ್ಬಾಸ್ನಲ್ಲಿರುವ ಸ್ಪರ್ಧಿಗಳ ಪೈಕಿ ಚಂದನಾ ಅತಿ ಕಿರಿಯವರು. ಆ ಕಿರಿತನದಿಂದ ನೆಗೆಟಿವ್-ಪಾಸಿಟಿವ್ ಎರಡೂ ಆಗಿತ್ತು ಎಂಬುದು ಅವರ ಅಭಿಪ್ರಾಯ. ‘ಮೊದಲು ಬೆಸ್ಟ್ ಪರ್ಫಾರ್ಮರ್ ಅಂತ ಕೊಟ್ಟಾಗ ನಾನು ಚಿಕ್ಕವಳು ಎಂಬ ರೀಸನ್ ಕೊಟ್ಟರು. ಅದರಿಂದ ಒಂಥರ ಭಯ ಆಯಿತು. ಆಮೇಲೆ ನಾಮಿನೇಟ್ ಮಾಡುವವರೆಗೂ ಚಿಕ್ಕವಳು ಎಂಬುದೊಂದು ರೀಸನ್ ಆಗಿ ಹೋಯಿತು. ಚಿಕ್ಕವಳು ಅಂತ ನೆಗ್ಲೆಕ್ಟ್ ಮಾಡಿದ್ದೂ ನಡೆಯಿತು’ ಎನ್ನುತ್ತಾರೆ ಚಂದನಾ. ಈ ಎಲ್ಲದರ ನಡುವೆಯೂ ಬಿಗ್ಬಾಸ್ನಲ್ಲಿ ಅವಿಸ್ಮರಣೀಯ ಎನಿಸುವಂಥ ಕ್ಷಣಗಳೂ ಹಲವಾರು ಇವೆಯಂತೆ. ‘ಬಿಗ್ಬಾಸ್ನಲ್ಲಿ ಬೆಸ್ಟ್ ಮೊಮೆಂಟ್ಸ್ ಬಹಳಷ್ಟಿವೆ. ಆ ನೀರಿನ ಟಾಸ್ಕ್, ಅಮ್ಮ ಬಂದಿದ್ದು, ಲೆಟರ್ ಕಳಿಸಿದ್ದೆಲ್ಲ ಯಾವತ್ತೂ ನೆನಪಲ್ಲಿ ಇರುವಂಥವು.
ಅದರಲ್ಲೂ ಸುದೀಪ್ ಸರ್ ಅವರನ್ನು ಹಗ್ ಮಾಡಿದ್ದು ಎಂದಿಗೂ ಮರೆಯಲಾಗದ ಕ್ಷಣ’ ಎಂಬ ಸಂತೋಷ ಚಂದನಾ ಅವರದು. ಆಗಾಗ ಬೇಸರ ಮಾಡಿಕೊಳ್ಳುವುದು ಕಡಿಮೆ ಮಾಡಿದ್ದರೆ, ಟಾಸ್ಕ್ನಲ್ಲಿ ಎಲ್ಲರನ್ನೂ ಫ್ರೆಂಡ್ಸ್ ಥರ ನೋಡದೆ ಇದ್ದಿದ್ದರೆ ಇನ್ನೂ ಒಂದಷ್ಟು ದಿನ ಬಿಗ್ಬಾಸ್ನಲ್ಲಿ ಇರಬಹುದಿತ್ತು ಎನ್ನುವ ಚಂದನಾ, ತಮ್ಮಲ್ಲಿ ಇನ್ನೂ ಒಂದಷ್ಟು ಗುಣಗಳು ಇರಬೇಕಿತ್ತು ಎನ್ನುತ್ತಾರೆ. ‘ಮಾನಸಿಕವಾಗಿ ಇನ್ನಷ್ಟು ಸ್ಟ್ರಾಂಗ್ ಆಗಿದ್ದಿದ್ದರೆ, ದನಿ ಎತ್ತಿ ಮಾತನಾಡುವ ಗುಣ ಇದ್ದಿದ್ದರೆ, ದೈಹಿಕವಾಗಿ ಇನ್ನಷ್ಟು ಸಶಕ್ತಳಾಗಿದ್ದಿದ್ದರೆ ಈ ಬಿಗ್ಬಾಸ್ನಲ್ಲಿ ಇನ್ನಷ್ಟು ಚೆನ್ನಾಗಿ ಆಡಬಹುದಿತ್ತು’ ಎನ್ನುವ ಚಂದನಾಗೆ, ಬಿಗ್ಬಾಸ್ನಿಂದ ಒಂದಷ್ಟು ಒಳ್ಳೆಯದಾಗಲಿದೆ ಎಂಬ ಭರವಸೆ ಇದೆ. ‘ಬಿಗ್ಬಾಸ್ನಲ್ಲಿ ಭಾಗಿಯಾದ್ದರಿಂದ ನನ್ನ ವೃತ್ತಿಜೀವನಕ್ಕೆ ಅನುಕೂಲ ಆಗಲಿದೆ ಅನಿಸುತ್ತಿದೆ. ಬಿಗ್ಬಾಸ್ ಕಾರಣಕ್ಕೇ ಗಾಯನ, ಅಭಿನಯದ ಅವಕಾಶಗಳು ಬರಲಿದೆ’ ಎಂಬ ವಿಶ್ವಾಸವಿದೆ ಎನ್ನುತ್ತಾರೆ ಚಂದನಾ.