ಸಿನಿವಾಣಿ

ಎಮರ್ಜೆನ್ಸಿ ಚಿತ್ರ ವಿಮರ್ಶೆ: ಇಂದಿರಾ ಲೋಕದಲ್ಲಿ ಕಂಗನಾ ಮಿಂಚು

ಶಿವಮಲ್ಲಯ್ಯ ಸ್ಥಾವರಮಠ

ಚಿತ್ರ: ಎಮರ್ಜೆನ್ಸಿ

ನಿರ್ದೇಶನ: ಕಂಗನಾ ರಣಾವತ್

ತಾರಾಗಣ: ಕಂಗನಾ ರಣಾವತ್, ಅನುಪಮ್ ಖೇರ್, ಶ್ರೇಯಸ್ ತಲ್ಪಾಡೆ, ಮಹಿಮಾ ಚೌದ್ರಿ, ಮಿಲಿಂದ್ ಸೋಮನ್, ವಿಶಾಖ್ ನಾಯರ್, ಸತೀಶ್ ಕೌಶಿಕ್ ಮತ್ತಿತರರು.

ಶಿವ ಸ್ಥಾವರಮಠ

ಈ ಹಿಂದೆ ‘ಮಣಿಕರ್ಣಿಕಾ: ದ ಕ್ವೀನ್ ಆಫ್ ಝಾನ್ಸಿ’ ಹಾಗೂ ‘ತಲೈವಿ’ ಅಂತಹ ಐತಿಹಾಸಿಕ ಬಯೋಪಿಕ್ ಮಾಡಿ ಖ್ಯಾತಿ ಗಳಿಸಿದ್ದ ನಟಿ ಕಂಗನಾ ರಣಾವತ್ ಇದೀಗ ‘ಎಮರ್ಜೆನ್ಸಿ’ಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವತಾರ ತಾಳಿದ್ದಾರೆ. ಮೊದಲ ಬಾರಿಗೆ ನಿರ್ದೇಶನಕ್ಕೆ ಮುಂದಾಗಿರುವ ಈ ಚಿತ್ರದಲ್ಲಿ ಅವರ ಪರಿಶ್ರಮ ಎದ್ದು ಕಾಣುತ್ತಿದೆ. ಈ ಮೂಲಕ ಮತ್ತೊಮ್ಮೆ ಮೇಲುಗೈ ಸಾಧಿಸಿದ್ದಾರೆ.

‘ಎಮರ್ಜೆನ್ಸಿ’ಗೆ 1975-77ರ ಕಾಲದ ತುರ್ತು ಪರಿಸ್ಥಿತಿಯ ವಿಚಾರ ಕೇಂದ್ರಿಕೃತವಾದರೂ, ಇಡೀ ಚಿತ್ರದಲ್ಲಿ ಅದೊಂದೇ ವಿಷಯ ತಿಳಿಸಿಲ್ಲ. ಬದಲಾಗಿ ಇಂದಿರಾ ಗಾಂಧಿಯ ಇಡೀ ಜೀವನಗಾಥೆಯನ್ನು 146 ನಿಮಿಷಗಳಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ ಕಂಗನಾ ರಣಾವತ್.

ಇಂದಿರಾ ಗಾಂಧಿ ಬಾಲ್ಯದಿಂದ ಆರಂಭವಾಗುವ ಕಥೆಯು ಬಳಿಕ ಅವರು ಅಸ್ಸಾಂ ಬಿಕ್ಕಟ್ಟು ಪರಿಹರಿಸಿದ ರೀತಿ, ಪ್ರಧಾನಿಯಾಗಿ ಅಧಿಕಾರದ ಗದ್ದುಗೆಯೇರಿದ್ದು, ಬಾಂಗ್ಲಾ ವಿಮೋಚನೆ, ತುರ್ತು ಪರಿಸ್ಥಿತಿ ಕಾಲಘಟ್ಟ, ಆಪರೇಶನ್ ಬ್ಲೂ ಸ್ಟಾರ್ ಕಾರ್ಯಾಚರಣೆ ಹಾಗೂ ಅಂತಿಮವಾಗಿ ಹತ್ಯೆಯಾದುದು.... ಹೀಗೆ ಅವರ ಬದುಕಿನ ಸುತ್ತ ಇರುವ ಪ್ರಮುಖ ವಿಚಾರಗಳನ್ನು ಎರಡೂವರೆ ಗಂಟೆಗಳಲ್ಲಿ ಕಂಗನಾ ತೋರಿಸಿದ್ದಾರೆ. ಇಡೀ ಕಥೆಯು ಇಂದಿರಾ ಗಾಂಧಿ ಸುತ್ತ ಕೇಂದ್ರಿಕೃತವಾಗಿದೆ. ಅವರನ್ನು ಹೊರತುಪಡಿಸಿದ ದೃಶ್ಯಗಳು ಕಾಣಸಿಗುವುದು ಎರಡು-ಮೂರು ಮಾತ್ರ. ಎಲ್ಲಿಯೂ ಬೋರ್ ಎನಿಸದೆ ಒಂದೇ ರೀತಿಯಲ್ಲಿ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಒಂದು ರಾಜಕೀಯ ಇತಿಹಾಸ ಹೇಳುವಾಗ ಅದಕ್ಕೆ ಪೂರಕ ಅಧ್ಯಯನ, ದಾಖಲೆ ಬೇಕಾಗುತ್ತದೆ. ಚಿತ್ರದ ಕಥೆಯಲ್ಲಿ ಅಧ್ಯಯನ ಎದ್ದು ಕಾಣುತ್ತದೆ. ಕೆಲವೆಡೆ ಚಿತ್ರಗಳ ಮೂಲಕ ದಾಖಲೆ ನೀಡುವ ಪ್ರಯತ್ನ ಕೂಡ ಮಾಡಲಾಗಿದೆ.

ಚಿತ್ರದ ಪ್ಲಸ್ ಪಾಯಿಂಟ್ ಎಂದರೆ ಪಾತ್ರಗಳಿಗೆ ತಕ್ಕ ಕಲಾವಿದರ ಆಯ್ಕೆ ಹಾಗೂ ವಸ್ತಾಲಂಕಾರ, ವರ್ಣಾಲಂಕಾರ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರಣಾವತ್ ಜೀವಿಸಿದ್ದಾರೆ. ಅವರ ಧೈರ್ಯ, ಗತ್ತು ಹಾಗೂ ಭಾವನಾತ್ಮಕತೆ ಎಲ್ಲವನ್ನೂ ಮುಖ ಭಾವದಲ್ಲಿಯೇ ತೋರಿಸಿದ್ದಾರೆ. ಇಂದಿರಾ ಗಾಂಧಿಯನ್ನು ನೋಡದವರು ಮತ್ತೊಮ್ಮೆ ಕಣ್ತುಂಬಿಕೊಳ್ಳುವ ರೀತಿಯಲ್ಲಿ ಕಂಗನಾ ನಟಿಸಿದ್ದಾರೆ. ಇನ್ನು ಅನುಪಮ್ ಖೇರ್ (ಜಯಪ್ರಕಾಶ್ ನಾರಾಯಣ್), ಶ್ರೇಯಸ್ ತಲ್ಪಾಡೆ (ಅಟಲ್ ಬಿಹಾರಿ ವಾಜಪೇಯಿ), ಮಿಲಿಂದ್ ಸೋಮನ್ (ಸ್ಯಾಮ್ ಮಾಣಿಕ್ ಷಾ), ವಿಶಾಖ್ ನಾಯರ್ (ಸಂಜಯ್ ಗಾಂಧಿ), ಸತೀಶ್ ಕೌಶಿಕ್ (ಬಾಬು ಜಗಜೀವನ ರಾಮ್) ಪಾತ್ರಗಳಲ್ಲಿ ನೈಜತೆ ಎದ್ದು ಕಾಣುತ್ತದೆ.ಚಿತ್ರಕ್ಕೆ ರಿತೇಶ್ ಶಾ ಸಂಭಾಷಣೆ ಮೆರುಗು ತಂದಿದ್ದು, ಬಡಿದೆಬ್ಬಿಸುವಂತಿದೆ. ಟೆಟ್ಸುವೊ ನಾಗತಾ ಕ್ಯಾಮರ ಕೈಚಳಕ ಗಮನಸೆಳೆಯುತ್ತದೆ. ಛಾಯಾಗ್ರಹಣ ಹಾಗೂ ಕಲಾಸ್ಮಕ ಸೆಟ್‌ಗಳು 1970ರ ದಶಕವನ್ನು ಕಟ್ಟಿಕೊಡುತ್ತವೆ.