|ಚೇತನ್ ನಾಡಿಗೇರ್ ಬೆಂಗಳೂರು
‘ಮೊದಲು ಅವಳನ್ನ ಕೊಲ್ತೀನಿ, ಆಮೇಲೆ ನಿನ್ನನ್ನ ಕೊಲ್ತೀನಿ ...’ ತನ್ನ ಮಾತುಗಳೇ ತನಗೆ ಮುಂದೊಂದು ದಿನ ಉರುಳಾಗುತ್ತದೆ ಎಂದು ಅಮರ್ಗೆ ಗೊತ್ತಿರುವುದಿಲ್ಲ. ಕುಡಿದ ಮತ್ತಿನಲ್ಲಿ, ಹುಡುಗಿ ಬಿಟ್ಟು ಹೋದ ನೋವಿನಲ್ಲಿ ಏನೋ ಹೇಳಿಬಿಟ್ಟಿರುತ್ತಾನೆ. ಮುಂದೊಂದು ದಿನ ಅವಳ ಮೇಲೆ ದಾರುಣವಾಗಿ ಹಲ್ಲೆಯಾದಾಗ, ಆ ಪ್ರಕರಣ ಅವನಿಗೇ ಸುತ್ತಿಕೊಳ್ಳುತ್ತದೆ. ಅವನ ಮಾತು ಕೇಳಿದವರು, ರೋಷ ನೋಡಿದವರು, ಅವನ ತಿಕ್ಕಲುತನವನ್ನು ಸಹಿಸಿಕೊಂಡವರು ... ಅವನೇ ಅಪರಾಧಿ ಎಂದು ತೀರ್ವನಿಸಿ ಬಿಡುತ್ತಾರೆ. ಅಲ್ಲಿಗೆ ತಾನು ಮಾಡದ ಒಂದು ತಪ್ಪಿಗೆ ಅಮರ್ ಜೈಲು ಪಾಲಾಗುತ್ತಾನೆ. ತಾನು ನಿರಪರಾಧಿ ಎಂದು ಸಾಬೀತು ಪಡಿಸುವುದರ ಜತೆಗೆ, ತನ್ನ ಹುಡುಗಿಗೆ ನ್ಯಾಯ ಕೊಡಿಸುವುದಕ್ಕೆ ಮುಂದಾಗುತ್ತಾನೆ ...
ಈ ತರಹದ ಕಥೆ ಪ್ರೇಮ್ ನಿರ್ದೇಶನದ ಈ ಹಿಂದಿನ ಯಾವ ಸಿನಿಮಾಗಳಲ್ಲೂ ನೀವು ನೋಡಿರಲಿಕ್ಕಿಲ್ಲ. ಹಾಗಾಗಿ, ಅವರು ಹೊಸದೇನೋ ಪ್ರಯತ್ನ ಮಾಡಿರಬಹುದು ಎಂದು ಖುಷಿಯಾಗುತ್ತದೆ. ಆದರೆ, ಚಿತ್ರ ಸಂಪೂರ್ಣವಾಗಿ ಮುಗಿದಂತೆ ಆ ಖುಷಿ ಉಳಿಯುವುದಿಲ್ಲ. ಒಂದೊಳ್ಳೆಯ ಊಟ ಸಿಗಬಹುದು, ರುಚಿರುಚಿಯಾದ ಅಡುಗೆ ಇರಬಹುದು ಎಂದು ನಿರೀಕ್ಷೆಯಿಂದ ಬಂದವರಿಗೆ ಅರ್ಧ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇನ್ನೂ ಏನೋ ಬೇಕಿತ್ತು, ಎಲ್ಲೋ ಏನೋ ಮಿಸ್ ಆಗಿದೆ ಅಂದನಿಸುತ್ತದೆ.
‘ಏಕ್ ಲವ್ ಯಾ’ ಒಂದು ಅಪ್ಪಟ ಪ್ರೇಮಕಥೆಯ ಚಿತ್ರ. ಹೈಸ್ಕೂಲ್ನಲ್ಲಿರುವಾಗಲೇ ನಾಯಕನಿಗೆ ಲವ್ ಆಗುತ್ತದೆ. ಅಲ್ಲಿಂದ ಕಾಲೇಜು, ಆ ನಂತರ ಕೆಲಸ ... ಹೀಗೆ ಮೂರು ಕಾಲಘಟ್ಟದಲ್ಲಿ ಚಿತ್ರ ಸಾಗುತ್ತದೆ. ಈ ಮೂರೂ ಕಾಲಘಟ್ಟದ ಪ್ರಮುಖ ಹಂತಗಳನ್ನು ಫ್ಲಾಶ್ಬ್ಯಾಕ್ಗಳ ಮೂಲಕ ತೋರಿಸುತ್ತಾ ಹೋಗುತ್ತಾರೆ ಪ್ರೇಮ್ ಹಾಗೆ ನೋಡಿದರೆ, ಮೊದಲಾರ್ಧ ಹೆಚ್ಚೇನೂ ಆಗುವುದಿಲ್ಲ. ಚಿತ್ರಕ್ಕೊಂದು ವೇಗ ಬರುವುದೇ ದ್ವಿತೀಯಾರ್ಧದಲ್ಲಿ. ಯಾವಾಗ ನಾಯಕ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಾನೋ, ಅಲ್ಲಿಂದ ಅಸಲಿ ಚಿತ್ರ ಶುರುವಾಗುತ್ತದೆ. ಪ್ರೇಮಕಥೆಯು ಅಲ್ಲಿಂದ ಕ್ರೖೆಂ ಥ್ರಿಲ್ಲರ್ ರೂಪ ಪಡೆಯುತ್ತದೆ. ನಾಯಕನೂ ಓಡುತ್ತಾನೆ, ಚಿತ್ರವನ್ನೂ ಓಡಿಸಿಕೊಂಡು ಹೋಗುತ್ತಾನೆ. ಹಾಡು, ಫೈಟು, ದೃಶ್ಯವೈಭವಕ್ಕೆ ಪ್ರೇಮ್ ಮೊದಲಿನಿಂದಲೂ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾ ಬಂದಿದ್ದಾರೆ. ಇಲ್ಲೂ ಅದು ಮುಂದುವರಿದಿದೆ. ಅದಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಛಾಯಾಗ್ರಾಹಕ ಮಹೇಂದ್ರ ಸಿಂಹ ಅವರ ಬೆನ್ನು ತಟ್ಟಬೇಕು.
ಪ್ರೇಮ್ ಅವರ ಸಾಮಾಜಿಕ ಕಳಕಳಿ ಮತ್ತು ಚಿತ್ರದ ಮೂಲಕ ಹೇಳಹೊರಟಿರುವ ಸಂದೇಶವನ್ನು ಮೆಚ್ಚಬಹುದಾದರೂ, ಚಿತ್ರಕಥೆ ವಿಚಾರದಲ್ಲಿ ಅವರು ಇನ್ನಷ್ಟು ಗಮನಹರಿಸಬಹುದಿತ್ತು. ಪಾತ್ರಗಳಿಗೆ ಇನ್ನಷ್ಟು ಜೀವ ತುಂಬಬಹುದಿತ್ತು. ಅದು ಮಿಸ್ ಆಗಿರುವುದರಿಂದಲೇ ರೀಷ್ಮಾ ನಾಣಯ್ಯ, ರಚಿತಾ ರಾಮ್ ‘ಶಿಷ್ಯ’ ದೀಪಕ್ ತೆರೆಯ ಮೇಲೆ ಗೊಂಬೆಗಳಂತೆ ಕಾಣುತ್ತಾರೆ. ಮೊದಲ ಚಿತ್ರದಲ್ಲೇ ರಾಣ ಗಮನಸೆಳೆಯುತ್ತಾರೆ. ಶಶಿಕುಮಾರ್, ಚರಣ್ ರಾಜ್, ಸುಚೇಂದ್ರ ಪ್ರಸಾದ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.