'ಜನ ನಾಯಗನ್' ದೃಶ್ಯ​ ಲೀಕ್​ ವಿವಾದದಿಂದ ಕಡೆಗೂ ಪ್ರದೀಪ್​ಗೆ ಮುಕ್ತಿ 
ಸಿನಿವಾಣಿ

ಯಾರೋ ಮಾಡಿದ ತಪ್ಪಿಗೆ ಪ್ರದೀಪ್ ಕ್ಷಮೆ! 'ಜನ ನಾಯಗನ್' ದೃಶ್ಯ​ ಲೀಕ್​ ವಿವಾದದಿಂದ ಕಡೆಗೂ ಮುಕ್ತಿ, ರಜಿನಿ ಚಿತ್ರದಲ್ಲಿ ಅವಕಾಶ

ಪ್ರಮುಖ ಮುಖ್ಯಾಂಶಗಳು

  • ಜನ ನಾಯಗನ್ ಚಿತ್ರದ ದೃಶ್ಯ ಲೀಕ್​ ವಿವಾದಲ್ಲಿ ಪ್ರದೀಪ್​ ಹೆಸರು
  • ಅಮಾನತುಗೊಂಡಿದ್ದ ಎಡಿಟರ್​ ಪ್ರದೀಪ್​ಗೆ ಈಗ ರಜಿನಿ ಚಿತ್ರದಲ್ಲಿ ಅವಕಾಶ ​
ಚೆನ್ನೈ: ಸಿಎಂ, ನಟ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಜನ ನಾಯಗನ್​ ಚಿತ್ರದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿ ಭಾರಿ ವಿವಾದ ಸೃಷ್ಟಿಸಿತ್ತು. ಈ ಪ್ರಕರಣದಲ್ಲಿ ಚಲನಚಿತ್ರ ಸಂಪಾದಕರ ಸಂಘದಿಂದ ಸಸ್ಪೆಂಡ್ ಆಗಿದ್ದ ಸಿನಿಮಾದ ಎಡಿಟರ್​ ಪ್ರದೀಪ್​ಗೆ ಈಗ ತಮಿಳಿನ ಸೂಪರ್‌ಸ್ಟಾರ್ ರಜಿನಿಕಾಂತ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರದಲ್ಲಿ ಎಡಿಟರ್ ಆಗಿ ಅವಕಾಶ ನೀಡಲಾಗಿದೆ. ಈ ವಿಷಯ ಸದ್ಯ ವಿಜಯ್​ ಅಭಿಮಾನಿಗಳನ್ನು ಕೆರಳಿಸಿದೆ.
ಎರಡು ತಿಂಗಳ ಹಿಂದೆ ಜನ ನಾಯಗನ್​ ಚಿತ್ರದ ಅಸಲಿ ದೃಶ್ಯಗಳು ಜಾಲತಾಣಗಳಲ್ಲಿ ಸೋರಿಕೆ ಆಗಲು ಪ್ರತ್ಯಕ್ಷ ಕಾರಣ ಅಲ್ಲದೇ ಹೋದರೂ, ಬೇಜವಾಬ್ದಾರಿ ತೋರಿದ ಕಾರಣ ಪ್ರದೀಪ್ ಇ. ರಾಘವ್ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಯಿತು. ಆದರೀಗ, ರಜಿನಿಕಾಂತ್ ಅಭಿನಯಿಸಲಿರುವ ‘ಧರ್ಮನ್’ ಚಿತ್ರದ ಎಡಿಟಿಂಗ್ ಜವಾಬ್ದಾರಿಯನ್ನು ಸಂಪೂರ್ಣವಾಗಿ ಪ್ರದೀಪ್​ಗೆ ವಹಿಸಲಾಗಿದೆ.
ಅಸಲಿಗೆ ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಬೆನ್ನಲ್ಲೇ 16 ಜನರನ್ನು ಬಂಧಿಸಲಾಯಿತು. ವರದಿಗಳ ಪ್ರಕಾರ, ಪ್ರದೀಪ್​ ಜೊತೆಗೆ ಕೆಲಸ ಮಾಡುತ್ತಿದ್ದ ಫ್ರೀಲಾನ್ಸ್ ಅಸಿಸ್ಟೆಂಟ್ ಎಡಿಟರ್ ಒಬ್ಬ, ಯಾರೂ ಅಷ್ಟು ಸುಲಭವಾಗಿ ಪ್ರವೇಶಿಸಲು ಸಾಧ್ಯವಿರದ ಎಡಿಟಿಂಗ್ ಸ್ಟುಡಿಯೋದಿಂದ ಸಿನಿಮಾದ ಓರಿಜಿನಲ್ ದೃಶ್ಯಗಳನ್ನು ಕದ್ದು, ಅವುಗಳನ್ನು ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ತನಿಖೆಯಲ್ಲಿ ಸ್ಪಷ್ಟವಾಯಿತು.
ಈ ಸೋರಿಕೆಯಲ್ಲಿ ಪ್ರದೀಪ್​ ಅವರ ಕೈವಾಡ ಇಲ್ಲದೆ ಹೋದರೂ, ಅವರ ಬೇಜವಾಬ್ದಾರಿಯೇ ಇಷ್ಟೆಲ್ಲ ಸಮಸ್ಯೆಗೆ ಕಾರಣ ಎಂಬುದು ಸಂಘ ವಾದ. ಹೀಗಾಗಿಯೇ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಯಿತು. ತಮ್ಮ ತಪ್ಪಿಗೆ ಪ್ರದೀಪ್​ ಕ್ಷಮೆಯಾಚಿಸಿದ ನಂತರ ಈ ವಿವಾದ ಸುಖಾಂತ್ಯ ಕಂಡಿದ್ದು, ಪ್ರದೀಪ್ ಇ. ರಾಘವ್ ಅವರಿಗೆ ರಜಿನಿಕಾಂತ್​ ಅವರ ಮುಂದಿನ ಚಿತ್ರದಲ್ಲಿ ಎಡಿಟರ್​ ಆಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗಿದೆ.

ರಜಿನಿ 173ನೇ ಚಿತ್ರ ‘ಧರ್ಮನ್’

ಕಮಲ್ ಹಾಸನ್ ಅವರ ‘ರಾಜ್‌ಕಮಲ್ ಫಿಲ್ಮ್ಸ್’ ಸಂಸ್ಥೆ ನಿರ್ಮಿಸುತ್ತಿರುವ ಈ ಚಿತ್ರವು, ರಜಿನಿಕಾಂತ್ ಅವರ ವೃತ್ತಿಜೀವನದ 173ನೇ ಸಿನಿಮಾ ಎನ್ನಲಾಗಿದೆ. ಇತ್ತೀಚೆಗಷ್ಟೇ ‘ಧರ್ಮನ್’ ಚಿತ್ರದ ಚಿತ್ರೀಕರಣ ಶುರುವಾಗಿದೆ. ವಿಶೇಷ ಎಂದರೆ, ಈ ಚಿತ್ರದಲ್ಲಿ ರಜಿನಿ ಪ್ರಪ್ರಥಮ ಬಾರಿಗೆ ವೈದ್ಯರಾಗಿ ಬೆಳ್ಳಿಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ,(ಏಜೆನ್ಸೀಸ್).