ಚಿತ್ರ: ಎಡಗೈಯೇ ಅಪಘಾತಕ್ಕೆ ಕಾರಣ
ನಿರ್ದೇಶನ: ಸಮರ್ಥ್ ಬಿ. ಕಡಕೋಳ್
ತಾರಾಗಣ: ದಿಗಂತ್, ನಿಧಿ ಸುಬ್ಬಯ್ಯ, ಧನು ಹರ್ಷ, ಸೌರವ್ ಲೋಕೇಶ್, ನಿರೂಪ್ ಭಂಡಾರಿ, ರಾಧಿಕಾ ನಾರಾಯಣ್, ಕೃಷ್ಣ ಹೆಬ್ಬಾಳೆ ಮತ್ತಿತರರು.
ಶಿವ ಸ್ಥಾವರಮಠ
ಜಗತ್ತಿನಲ್ಲಿ ಶೇ.90ರಷ್ಟು ಜನ ಬಲಗೈ ಬಳಕೆ ಮಾಡಿದರೆ, ಉಳಿದವರು ಎಡಚರರು. ಹೀಗಾಗಿ ಎಡಗೈ ಬಳಕೆ ಮಾಡುವವರನ್ನು ಅಪಹಾಸ್ಯದಿಂದ ನೋಡಿ, ಮೂದಲಿಸುವುದು ಸಾಮಾನ್ಯ. ಹೀಗಿರುವಾಗ ಅಕಸ್ಮಾತ್ ಒಂದು ದಿನ ಎಡಗೈ ಬಳಸಲು ಸಾಧ್ಯವಾಗಲಿಲ್ಲವೆಂದರೆ ಎಷ್ಟೆಲ್ಲಾ ರಾದ್ಧಾಂತ ಎದುರಿಸಬೇಕಾಗುತ್ತದೆ ಎಂಬುದನ್ನು ‘ಎಡಗೈಯೇ ಅಪಘಾತಕ್ಕೆ ಕಾರಣ’ದಲ್ಲಿ ನಿರೂಪಿಸಲಾಗಿದೆ. ಇದು ಎಡಚರ ಬದುಕಿನ ಕಥೆಯಲ್ಲ ಬದಲಾಗಿ, ಇದು ಎಡಗೈ ಇಲ್ಲವಾದಾಗ ಆಗುವ ರಾದ್ಧಾಂತದ ಕಥೆ.
ಟೆಕ್ಕಿ ಲೋಹಿತ್ (ದಿಗಂತ್) ಲ್‌ಟೆ ಹ್ಯಾಂಡರ್. ಕ್ರಿಕೆಟ್ ಆಡಲು ಹೋಗಿ ಎಡಗೈಗೆ ಪೆಟ್ಟುಮಾಡಿಕೊಳ್ಳುತ್ತಾನೆ. ಅಂದೇ ಗೆಳತಿ ಪೂಜಾ (ನಿಧಿ) ಆತನನ್ನು ತನ್ನ ಫ್ಲ್ಯಾಟ್‌ಗೆ ಆಹ್ವಾನಿಸಿರುತ್ತಾಳೆ. ಕದ್ದು ಮುಚ್ಚಿ ಅಲ್ಲಿಗೆ ಹೋಗುವ ಲೋಹಿತ್, ಪೂಜಾ ನೀಡುವ ಗಿಫ್ಟ್ ನೋಡಿ ಖುಷಿಯಾಗುತ್ತಾನೆ. ಬಾಲ್ಕನಿಯಲ್ಲಿ ಇಬ್ಬರು ರೊಮ್ಯಾಂಟಿಕ್ ಮೂಡ್‌ನಲ್ಲಿರುವಾಗಲೇ ಅಲ್ಲೊಂದು ದುರ್ಘಟನೆ ಸಂಭವಿಸುತ್ತದೆ. ಆಗ ಆ ಸ್ಥಳದಿಂದ ಎಸ್ಕೇಪ್ ಆಗಲು ಹೆಣಗಾಡುವ ಲೋಹಿತ್ ಸರಣಿ ಸಾವುಗಳನ್ನು ನೋಡುತ್ತಾನೆ. ಹೀಗಿರುವಾಗ ಆ ಸರಣಿ ಕೊಲೆಗಳಿಗೆ ಲೋಹಿತ್ ಕಾರಣೀಕರ್ತನಾ? ಅಥವಾ ಬೇರೆಯವರಾ? ಇಂತಹ ಹಲವಾರು ಪ್ರಶ್ನೆಗಳೊಂದಿಗೆ ಸೀಟಿನ ತುದಿಯಂಚಿನಲ್ಲಿ ಕೂರಿಸುವಂತಹ ರೋಚಕತೆಯೊಂದಿಗೆ ಸಿನಿಮಾ ಸಾಗುತ್ತದೆ.
ಮರ್ಡರ್ ಮಿಸ್ಟರಿ ಕಥೆಯನ್ನು ಮನರಂಜನೆಯೊಂದಿಗೆ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸಮರ್ಥ್. ತಾವು ಹೇಳಬೇಕಾಗಿರುವ ವಿಚಾರಕ್ಕೆ ಎಡಗೈ ಬಳಕೆಯ ವಿಷಯವಸ್ತುವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಲೆಫ್ಟ್ ಹ್ಯಾಂಡರ್‌ಗಳ ಲೈಫ್ಸ್ಟೈಲ್ ಬದಲಾಗಿ ಕೌತುಕ ಕಥೆಗೆ ಆದ್ಯತೆ ನೀಡಿದ್ದಾರೆ. ಹೀಗಾಗಿ, ಸಿದ್ಧ ಬರವಣಿಗೆಗಿಂತ ಕಥೆ ವಿಭಿನ್ನ ಎನಿಸುತ್ತದೆ. ಯಾವ ದೃಶ್ಯಗಳೂ ಅನಗತ್ಯ ಎನಿಸದೆ, ಎರಡು ತಾಸು ಹಿಡಿದಿಟ್ಟುಕೊಂಡು ಮನರಂಜಿಸುತ್ತದೆ.
ದಿಗಂತ್ ಇಡೀ ಕಥೆಯಲ್ಲಿ ಆವರಿಸಿದ್ದು, ಅವರೇ ಹೈಲೈಟ್. ವಿವಿಧ ಮುಖಭಾವಗಳಿಂದ ಗುಳಿಕೆನ್ನೆಯ ನಟ ‘ಮನಸಾರೆ’ ನಗಿಸುತ್ತಾರೆ. ನಿಧಿ ಸುಬ್ಬಯ್ಯ ಪಾತ್ರ ಚಿಕ್ಕದಿದ್ದರೂ, ಕಥೆಯಲ್ಲಿ ಪ್ರಾಮುಖ್ಯವಿದೆ. ಧನು ಹರ್ಷ ಮೊದಲ ಚಿತ್ರದಲ್ಲಿ ಗಮನಸೆಳೆಯುತ್ತಾರೆ. ನಿರೂಪ್ ಭಂಡಾರಿ ಅತಿಥಿ ಪಾತ್ರವಾದರೂ, ಕಥೆಯ ತತ್ವ ಅವರ ಪಾತ್ರದಿಂದಲೇ ಅರ್ಥಮಾಡಿಸುತ್ತದೆ. ಚಿತ್ರವು ತಾಂತ್ರಿಕವಾಗಿ ಸಶಕ್ತವಾಗಿ ಮೂಡಿಬಂದಿದ್ದು, ಅಭಿಮನ್ಯು ಛಾಯಾಗ್ರಹಣ ಮತ್ತು ಪ್ರದ್ಯೋತ್ತನ್ ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿ ಮೂಡಿಬಂದಿದೆ.