ಸಿನಿವಾಣಿ

ರೀಲ್ ಕಥೆಗೆ ರಿಯಲ್ ಘಟನೆ ಸ್ಪೂರ್ತಿ

ಸ್ಯಾಂಡಲ್​ವುಡ್​ನಲ್ಲಿ ಇತ್ತೀಚೆಗೆ ನೈಜ ಘಟನೆಯನ್ನು ಆಧರಿಸಿದ ಚಿತ್ರಗಳು ಹೆಚ್ಚಾಗುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ ‘ಒಂದು ಗಂಟೆಯ ಕಥೆ’. ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಕೋಣನಕುಂಟೆಯಲ್ಲಿ ನಡೆದ ನೈಜ ಘಟನೆಯನ್ನು ಇಟ್ಟುಕೊಂಡು ಈ ಚಿತ್ರ ಮಾಡಲಾಗಿದೆ. ಹಿಂದೆ ‘ಮತ್ತೆ ಮುಂಗಾರು’ ಎಂಬ ಸಿನಿಮಾ ಮಾಡಿದ್ದ ರಾಘವ್ ದ್ವಾರ್ಕಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

‘ಈ ಘಟನೆ ರಾಜ್ಯಾದ್ಯಂತ ಸುದ್ದಿ ಮಾಡಿತ್ತು. ಅದನ್ನು ಸಿನಿಮ್ಯಾಟಿಕ್ ಆಗಿ ಮಾಡಿದ್ದೇವೆ. ಘಟನೆ ಗಂಭೀರವಾಗಿದ್ದರೂ ಅದನ್ನು ಹಾಸ್ಯದ ರೂಪದಲ್ಲಿ ಹೇಳಿರುವುದು ಇದರ ವಿಶೇಷತೆ. ಪ್ರೀತಿಸುತ್ತಿದ್ದ ಮೆಡಿಕಲ್ ಸ್ಟೂಡೆಂಟ್​ಗಳ ಬದುಕಲ್ಲಿ ನಡೆದ ಘಟನೆ ಇದಾಗಿದೆ. ಆ ಘಟನೆ ಏನು ಎಂಬುದನ್ನು ಚಿತ್ರದಲ್ಲಿಯೇ ನೋಡಬೇಕು’ಎಂದು ಹೇಳುತ್ತಾರೆ ನಿರ್ದೇಶಕ ರಾಘವ್ ದ್ವಾರ್ಕಿ.

ನಿರ್ಮಾಪಕ ಕಶ್ಯಪ್ ದಾಕೋಜು ಮಾತನಾಡಿ, ‘ನಮ್ಮ ಸಿನಿಮಾಗೆ ಸೆನ್ಸಾರ್​ನವರು ‘ಎ’ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಹಾಗಂತ ಈ ಚಿತ್ರದಲ್ಲಿ ಡಬಲ್ ಮೀನಿಂಗ್ ಡೈಲಾಗ್​ಗಳಿಲ್ಲ. ಎಲ್ಲವೂ ಡೈರೆಕ್ಟ್ ಮೀನಿಂಗ್​ಗಳೇ. ಹಾಗಾಗಿ ಇದು ಎಲ್ಲರೂ ನೋಡುವಂತಹ ಚಿತ್ರ. ಈಗಾಗಲೇ ನಾವು ಹೆಣ್ಣು ಮಕ್ಕಳಿಗಾಗಿ ನಮ್ಮ ಸಿನಿಮಾದ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದೆವು. ಅವರೆಲ್ಲರೂ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯದಲ್ಲೇ ಚಿತ್ರವನ್ನು ರಿಲೀಸ್ ಮಾಡುತ್ತೇವೆ’ಎಂದರು.

ಅಜಯ್ ರಾಜ್ ನಾಯಕರಾಗಿ ನಟಿಸಿದ್ದು, ನಾಯಕಿಯಾಗಿ ಶನಾಯಾ ಕಾಟ್ವೆ ನಟಿಸಿದ್ದಾರೆ. ಉಳಿದಂತೆ ಯಶವಂತ ಸರದೇಶಪಾಂಡೆ, ಸ್ವಾತಿ ಶರ್ವ, ಪ್ರಕಾಶ್ ತುಮ್ಮಿನಾಡು, ಚಿದಾನಂದ್, ಚಂದ್ರಕಲಾ, ಆನಂದ್, ನಾಗೇಂದ್ರ ಷಾ, ಪ್ರಶಾಂತ್ ಸಿದ್ದಿ ಸೇರಿದಂತೆ ಒಟ್ಟು 123 ಕಲಾವಿದರು ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಒಂದು ಗಂಟೆಯ ಕಥೆ’ ಚಿತ್ರಕ್ಕೆ ಸಂಗೀತ ಡೆನಿಸ್ ವಲ್ಲಬನ್ ಸಂಗೀತ ನಿರ್ದೇಶನವಿದೆ. ಗಣೇಶ್ ಮಲ್ಲಯ್ಯ ಛಾಯಾಗ್ರಹಣವಿದೆ.