ಸಿನಿವಾಣಿ

ಪ್ರಾಣ ಬೆದರಿಕೆ ಇದೆ, ನಮಗೆ ಭದ್ರತೆ ನೀಡಿ ಎಂದು ದ್ವಾರಕೀಶ್ ಪುತ್ರ ಯೋಗೇಶ್​ರಿಂದ ಪೊಲೀಸ್​ ಮನವಿ​

ಬೆಂಗಳೂರು: ಆಯುಷ್ಮಾನ್ ಭವ ಕನ್ನಡ ಸಿನಿಮಾದ ಹಣಕಾಸು ವಿಚಾರವಾಗಿ ಉಂಟಾದ ಜಗಳ ತಾರಕಕ್ಕೇರಿ ಪ್ರಕರಣ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ಹಿರಿಯ ನಟ, ನಿರ್ಮಾಪಕ ಹಾಗೂ ನಿರ್ದೇಶಕ ದ್ವಾರಕೀಶ್​ ಅವರ ಪುತ್ರ ನಮಗೆ ಪ್ರಾಣ ಬೆದರಿಕೆ ಇದೆ, ಭದ್ರತೆ ನೀಡುವಂತೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.

ದ್ವಾರಕೀಶ್ ಅವರು​ ಆಯುಷ್ಮಾನ್ ಭವ ಕನ್ನಡ ಸಿನಿಮಾ ವಿತರಣೆಯ ಹಕ್ಕು ಪಡೆದಿದ್ದರು. ಸಿನಿಮಾ ಬಿಡಿಗಡೆಯ ಬಳಿಕ ಹಣಕಾಸಿನ ವಿಚಾರವಾಗಿ ಮನಸ್ತಾಪ ಉಂಟಾಗಿದೆ ಎನ್ನಲಾಗಿದೆ. ಸುಮಾರು 7 ಕೋಟಿ ರೂ. ಹಣವನ್ನು ಕೊಡಬೇಕಾಗಿರುವ ಹಿನ್ನೆಲೆಯಲ್ಲಿ ಶನಿವಾರ ತಡರಾತ್ರಿ ಜಯಣ್ಣ, ಭೋಗೇಂದ್ರ ಹಾಗೂ ರಮೇಶ್ ಹಣವನ್ನು ಕೇಳಲು ಹೆಚ್ಎಸ್ಆರ್ ಲೇಔಟ್​ನಲ್ಲಿರುವ ದ್ವಾರಕೀಶ್​ ಅವರ ಮನೆಗೆ ಹೋಗಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.

ಈ ವೇಳೆ ಹಣವನ್ನು ವಾಪಸ್ ನೀಡಲು ದ್ವಾರಕೀಶ್ 2 ವರ್ಷ ಸಮಯಾವಕಾಶ ಕೇಳಿದ್ದಾರೆ. ಆದರೆ, ಜಯಣ್ಣ, ಭೋಗೇಂದ್ರ ಮತ್ತು ರಮೇಶ್ ಮೂರು ದಿನದಲ್ಲಿ ಹಣ ವಾಪಸ್ ಮಾಡಲು ಸೂಚಿಸಿದ್ದಾರೆ. ಆಗೋದಿಲ್ಲ ಎಂದು ದ್ವಾರಕೀಶ್ ಹೇಳಿದ ಬಳಿಕ ಇದೇ ವಿಚಾರವಾಗಿ ದ್ವಾರಕೀಶ್ ಮನೆಯಲ್ಲಿ ಮಾತಿಗೆ ಮಾತು ಬೆಳೆದಿದೆ. ಮನೆಯಲ್ಲಿ ಒಬ್ಬರಿಗೊಬ್ಬರು ಜೋರಾಗಿ ಕೂಗಾಡಿಕೊಂಡು ಜಗಳ ತಾರಕಕ್ಕೆ ಏರಿದೆ ಎನ್ನಲಾಗಿದೆ.

ಬಳಿಕ ಮನೆಗೆ ಬಂದ ದ್ವಾರಕೀಶ್​ ಪುತ್ರ ಯೋಗೇಶ್​, ಹೆಚ್ಎಸ್ಆರ್ ಲೇಔಟ್​ಗೆ ದೂರು ನೀಡಿದ್ದಾರೆ. ನಮಗೆ ಪ್ರಾಣ ಬೆದರಿಕೆ ಇದೆ. ಭದ್ರತೆ ನೀಡುವಂತೆ ಮನವಿ ಮಾಡಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರ ಮಾಡಿರುವ ಹೆಚ್ಎಸ್ಆರ್ ಲೇಔಟ್ ಪೊಲೀಸರು, ದ್ವಾರಕೀಶ್ ಮನೆಗೆ ಹೋಗಿ ಖುದ್ದಾಗಿ ಮಾಹಿತಿ ಪಡೆದು ಬಂದಿದ್ದಾರೆ. ಘಟನೆಯ ಸಂಬಂಧ ಎನ್ಸಿಆರ್ ಮಾಡಿಕೊಂಡಿರುವ ಪೊಲೀಸರು, ಭದ್ರತೆಗಾಗಿ ಇಬ್ಬರು ಸಿಬ್ಬಂಧದಿಯನ್ನು ನಿಯೋಜನೆ ಮಾಡಿದ್ದು, ಘಟನೆ ಬಗ್ಗೆ ಮಾಹಿತಿ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)