ಸಿನಿವಾಣಿ

ಭೀಮನಾಟ ಶುರು!; ದುನಿಯಾ ವಿಜಯ್ ಹೊಸ ಚಿತ್ರಕ್ಕೆ ಚಾಲನೆ

ಬೆಂಗಳೂರು: ಮೊದಲ ಚಿತ್ರ ‘ಸಲಗ’ ಸೆಟ್ಟೇರಿದ್ದೂ ಅಲ್ಲೇ. ಆ ಚಿತ್ರ ಹಿಟ್ ಆಯಿತು. ಹಾಗಾಗಿ, ಎರಡನೆಯ ಚಿತ್ರದ ಮುಹೂರ್ತ ಸಹ ಅದೇ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲೇ ಆಗಬೇಕು ಎಂದು ‘ದುನಿಯಾ’ ವಿಜಯ್ ಆಸೆಪಟ್ಟಿದ್ದರಂತೆ. ಆ ಆಸೆ ಕೊನೆಗೂ ಈಡೇರಿದೆ. ವಿಜಯ್ ನಿರ್ದೇಶನದ ‘ಭೀಮ’ ಅದೇ ದೇವಸ್ಥಾನದಲ್ಲಿ ಇತ್ತೀಚೆಗೆ ಅಧಿಕೃತವಾಗಿ ಪ್ರಾರಂಭವಾಗಿದೆ.

‘ಭೀಮ’ ಚಿತ್ರದ ಮುಹೂರ್ತಕ್ಕೆ ಧನಂಜಯ್ ಮತ್ತು ಶ್ರೀನಗರ ಕಿಟ್ಟಿ ಅತಿಥಿಗಳಾಗಿ ಬಂದಿದ್ದರು. ಅವರು ಶುಭಕೋರಿ ಹೊರಟ ನಂತರ ವಿಜಯ್ ಮಾತಿಗೆ ನಿಂತರು. ‘ನಾನು ಕಂಡ ಕೆಲವು ಘಟನೆಗಳನ್ನು ಆಧರಿಸಿ ಕಥೆ ಮಾಡಿಕೊಂಡಿದ್ದೇನೆ. ಚಿತ್ರಕ್ಕೆ ಶೀರ್ಷಿಕೆ ಏನಿಡಬೇಕೆಂದು ಸಾಕಷ್ಟು ಚರ್ಚೆಯಾಯಿತು. ಕೊನೆಗೆ ‘ಭೀಮ’ ಫಿಕ್ಸ್ ಆಯಿತು. ಆದರೆ, ಆ ಶೀರ್ಷಿಕೆ ರಾಮು ಎಂಟರ್​ಪ್ರೖೆಸಸ್ ಬಳಿ ಇತ್ತು. ಮಾಲಾಶ್ರೀ ಮೇಡಂ ಅವರಿಂದ ನಮ್ಮ ನಿರ್ವಪಕರು ಈ ಶೀರ್ಷಿಕೆ ಕೊಡಿಸಿದರು’ ಎಂದು ಅವರಿಗೆ ಧನ್ಯವಾದ ತಿಳಿಸಿದರು ವಿಜಯ್.

ಈ ಹಿಂದೆ ‘ಜಯಮ್ಮನ ಮಗ’ ಚಿತ್ರದಲ್ಲಿ ವಿಜಯ್ ತಾಯಿಯ ಪಾತ್ರದಲ್ಲಿ ನಟಿಸಿದ್ದ ಕಲ್ಯಾಣಿ ರಾಜು, ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬ್ಲಾಕ್ ಡ್ರಾಗನ್ ಮಂಜು ಸೇರಿದಂತೆ ಹಲವು ಹೊಸ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ಭೀಮ’ ಚಿತ್ರವನ್ನು ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ನಿರ್ವಿುಸುತ್ತಿದ್ದಾರೆ.