ಸಿನಿವಾಣಿ

ಆ.9ಕ್ಕೆ A 'ಭೀಮ' ; ದುನಿಯಾ ವಿಜಯ್​ ನಟಿಸಿ, ನಿರ್ದೇಶಿಸಿರುವ ಕಲ್ಟ್​ ಸಿನಿಮಾ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ಸಲಗ' ಚಿತ್ರದ ಬಳಿಕ ದುನಿಯಾ ವಿಜಯ್​ ನಟಿಸಿ, ನಿರ್ದೇಶಿಸಿರುವ ಸಿನಿಮಾ "ಭೀಮ'. ಈಗಾಗಲೇ ಚಿತ್ರದ ಐದು ಹಾಡುಗಳು ರಿಲೀಸ್​ ಆಗಿದ್ದು ಜಾಲತಾಣದಲ್ಲಿ ವೈರಲ್​ ಆಗಿವೆ. ಇತ್ತೀಚೆಗಷ್ಟೆ ಚಿತ್ರದ ಸೆನ್ಸಾರ್​ ಪೂರ್ಣಗೊಂಡಿದ್ದು, "ಎ' ಪ್ರಮಾಣ ಪತ್ರ ದೊರೆತಿದೆ. ಆ. 9ರಂದು "ಭೀಮ' ತೆರೆಗೆ ಬರಲಿದ್ದು, ಸದ್ಯ ಪ್ರಚಾರದ ಕೆಲಸಗಳು ಭರದಿಂದ ಸಾಗಿವೆ.

ಚಿತ್ರದ ಬಗ್ಗೆ ನಿರ್ದೇಶಕ, ನಾಯಕ ವಿಜಯ್​, ""ಸಲಗ' ಚಿತ್ರದಲ್ಲಿ ಸಿದ್ದಿ ಜನಾಂಗದ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟಂತೆಯೇ ಈ ಚಿತ್ರದಲ್ಲೂ ನಾಗರಹೊಳೆಯ ಬುಡಕಟ್ಟು ಪ್ರತಿಭೆಗಳಿಗೆ ಅವಕಾಶ ನೀಡಿದ್ದೇವೆ. ಅವರು ಹಾಡಿರುವ "ಬೂಂ ಬೂಂ ಬೆಂಗಳೂರು' ಹಾಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ."ಭೀಮ'ನ ಮೂಲಕ ಒಂದು ಸೂಕ್ಷ$್ಮ ವಿಷಯವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ನಮ್ಮ ಚಿತ್ರದಿಂದ ಜನರಲ್ಲಿ ಜಾಗೃತಿ ಮೂಡಿಸುವಂತಾಗಬೇಕು. ನಾನು ಶಾಲೆಯಲ್ಲಿ ಬಿ ಪ್ಲಸ್​, ಸಿ ಪ್ಲಸ್​ ಮಾರ್ಕ್ಸ್​ ಪಡೆಯುತ್ತಿದ್ದೆ. ಈಗ "ಭೀಮ'ನಿಗೆ ಸೆನ್ಸಾರ್​ನಲ್ಲಿ "ಎ' ಸಿಕ್ಕಿದೆ. ಕೆಲವು ಕಟ್ಸ್​ ಮತ್ತು ಮ್ಯೂಟ್​ ಮಾಡಲು ತಿಳಿಸಿದ್ದಾರೆ. ಅದರಂತೆ ಎಲ್ಲವನ್ನೂ ಮಾಡುತ್ತೇವೆ ' ಎಂದು ನಗುತ್ತಲೇ ಹೇಳಿಕೊಂಡರು.

ಹಾಗೇ ಕೆಲ ತಿಂಗಳಿನಿಂದ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರು ಬಾರದ ಕಾರಣ ರಾಜ್ಯಾದ್ಯಂತ ಬಾಗಿಲು ಹಾಕಿದ್ದ 20 ಥಿಯೇಟರ್​ಗಳು "ಭೀಮ'ನ ಮೂಲಕ ಮತ್ತೆ ಪ್ರದರ್ಶನ ಪ್ರಾರಂಭಿಸುತ್ತಿರುವ ಕುರಿತು ನಿರ್ಮಾಪಕರಾದ ಜಗದೀಶ್​ ಮತ್ತು ಕೃಷ್ಣ ಸಾರ್ಥಕ್​ ಸಂತಸ ವ್ಯಕ್ತಪಡಿಸಿದರು. ದುನಿಯಾ ವಿಜಯ್​ಗೆ ಚಿತ್ರದಲ್ಲಿ ಅಶ್ವಿನಿ ಅಂಬರೀಶ್​ ನಾಯಕಿಯಾಗಿದ್ದು, ಬ್ಲಾಕ್​ ಡ್ರಾಗನ್​ ಮಂಜು, ಪ್ರಿಯಾ ಶಠಮರ್ಷಣ, ಕಾಕ್ರೋಚ್​ ಸುಧಿ, ರಂಗಾಯಣ ರು, ಕಲ್ಯಾಣಿ ರಾಜು, ಅಚ್ಯುತ್​ ಕುಮಾರ್​ ಪ್ರಮುಖ ತಾರಾಗಣದಲ್ಲಿದ್ದಾರೆ. ಉಳಿದಂತೆ ಚಿತ್ರಕ್ಕೆ ಶಿವಸೇನಾ ಛಾಯಾಗ್ರಹಣ, ದೀಪು .ಎಸ್​ ಕುಮಾರ್​ ಸಂಕಲನ, ಮಾಸ್ತಿ ಸಂಭಾಷಣೆ, ವಿನೋದ್​, ಚೇತನ್​ ಡಿಸೋಜಾ, ಟೈಗರ್​ ಶಿವ ಸಾಹಸ ನಿರ್ದೇಶನವಿರಲಿದೆ.