ಸಿನಿವಾಣಿ

ಕಾಲಿವುಡ್​ ದುನಿಯಾದಲ್ಲಿ ವಿಜಯ ಯಾತ್ರೆ; "ಮೂಕುತಿ ಅಮ್ಮನ್​ 2' ಮೂಲಕ ತಮಿಳಿಗೆ ಡೆಬ್ಯೂ ಮಾಡಿದ ನಟ

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ನಟ ದುನಿಯಾ ವಿಜಯ್​ 2023ರ ತೆಲುಗು ಸಿನಿಮಾ "ವೀರಸಿಂಹರೆಡ್ಡಿ' ಮೂಲಕ ಟಾಲಿವುಡ್​ಗೆ ಪದಾರ್ಪಣೆ ಮಾಡಿದ್ದರು. ನಾಯಕ ಬಾಲಯ್ಯ ವಿರುದ್ಧ ಮುಸಾಲಿ ಪ್ರತಾಪ್​ ರೆಡ್ಡಿ ಎಂಬ ಖಡಕ್​ ವಿಲನ್​ ಪಾತ್ರದಲ್ಲಿ ತೊಡೆತಟ್ಟಿದ್ದರು. ವಿಜಯ್​ ನಟನೆಗೆ ಅತ್ಯುತ್ತಮ ಖಳನಟ ಸೈಮಾ ಪ್ರಶಸ್ತಿಯೂ ಒಲಿದು ಬಂದಿತ್ತು. ಇದೀಗ ಅವರು ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. "ಮೂಕುತಿ ಅಮ್ಮನ್​ 2: ಮಹಾಶಕ್ತಿ' ಚಿತ್ರದಲ್ಲಿ ದುನಿಯಾ ವಿಜಯ್​ ವಿಲನ್​ ಪಾತ್ರದಲ್ಲಿ ನಟಿಸಲಿದ್ದು, ಗುರುವಾರ ಚೆನ್ನೈನಲ್ಲಿ ಸಿನಿಮಾ ಮುಹೂರ್ತ ನೆರವೇರಿದೆ.

ಇದು 2020ರಲ್ಲಿ ರಿಲೀಸ್​ ಆಗಿದ್ದ ಆರ್​ಜೆ ಬಾಲಾಜಿ ನಟಿಸಿ, ನಿರ್ದೇಶಿಸಿದ್ದ "ಮೂಕುತಿ ಅಮ್ಮನ್​' ಚಿತ್ರದ ಸೀಕ್ವೆಲ್​ ಆಗಿದ್ದು, ಮೂಕುತಿ ಅಮ್ಮನಾಗಿ ನಯನತಾರಾ ನಟಿಸಿದ್ದರು. ಸೀಕ್ವೆಲ್​ನಲ್ಲೂ ಅವರೇ ಮೂಕುತಿ ಅಮ್ಮನ ಪಾತ್ರದಲ್ಲಿ ಮುಂದುವರಿಯಲಿದ್ದು, ಈ ಚಿತ್ರಕ್ಕೆ ಸುಂದರ್​.ಸಿ ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ಜತೆಗೆ ವಿಲನ್​ ಪಾತ್ರಗಳಲ್ಲಿ ದುನಿಯಾ ವಿಜಿ, ಗರುಡಾ ರಾಮ್​ ನಟಿಸಲಿದ್ದು, ರೆಜಿನಾ ಕೆಸಾಂಡ್ರಾ, ಯೋಗಿ ಬಾಬು, ಊರ್ವಶಿ, ಮೀನಾ, ಅಭಿನಯ, ಕೂಲ್​ ಸುರೇಶ್​ ಪ್ರಮುಖ ತಾರಾಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಅಂದರೆ ಈ ಪಾತ್ರಕ್ಕಾಗಿ ನಟಿ ನಯನತಾರಾ ಕಳೆದ ಒಂದು ತಿಂಗಳಿನಿಂದ ಉಪವಾಸ ಮಾಡುತ್ತಿದ್ದು, ಹಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರಂತೆ.

ಅಲ್ಲಿ ಹೀರೋ, ಇಲ್ಲಿ ವಿಲನ್​:

ನಿರ್ದೇಶಕ ಸುಂದರ್​. ಸಿ, "ನಟ, ನಿರ್ದೇಶಕ, ಆ್ಯಕ್ಷನ್​ ಹೀರೋ ಆಗಿ ದುನಿಯಾ ವಿಜಯ್​ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಜತೆ ಕೆಲಸ ಮಾಡಬೇಕು ಅಂತ ನನಗೆ ಆಸೆಯಿತ್ತು. ದೊಡ್ಡ ಹೀರೋ ಆಗಿದ್ದರೂ ನಮ್ಮ ಚಿತ್ರದಲ್ಲಿ ನೆಗಟಿವ್​ ಪಾತ್ರದಲ್ಲಿ ನಟಿಸಲು ಒಪ್ಪಿದ್ದಾರೆ. "ಮೂಕುತಿ ಅಮ್ಮನ್​ 2' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರಿಗೆ ಶುಭವಾಗಲಿ' ಎಂದು ದುನಿಯಾ ವಿಜಯ್​ರನ್ನು ಕಾಲಿವುಡ್​ಗೆ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ನಾಲ್ಕು ಚಿತ್ರಗಳಲ್ಲಿ ಬಿಜಿ

ಕಳೆದ ವರ್ಷ "ಭೀಮ' ರಿಲೀಸ್​ ಆದ ಬಳಿಕ, ಸದ್ಯ ದುನಿಯಾ ವಿಜಯ್​ ನಾಲ್ಕು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. "ಕಾಟೇರ' ಕಥೆಗಾರ ಜಡೇಶ್​ ಕೆ. ಹಂಪಿ ನಿರ್ದೇಶಿಸುತ್ತಿರುವ "ಲ್ಯಾಂಡ್​ಲಾರ್ಡ್​' ಚಿತ್ರದಲ್ಲಿ ವಿಜಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ವಿಜಿ ಪುತ್ರಿ ರಿತನ್ಯಾ ಕೂಡ ಸ್ಯಾಂಡಲ್​ವುಡ್​ಗೆ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. "ಸಲಗ', "ಭೀಮ' ಚಿತ್ರಗಳ ಯಶಸ್ಸಿನ ಬಳಿಕ ವಿಜಯ್​, ನಿರ್ದೇಶಿಸುತ್ತಿರುವ ಮೂರನೇ ಸಿನಿಮಾ "ಸಿಟಿಲೈಟ್ಸ್​'. ಈ ಚಿತ್ರದ ಮೂಲಕ ವಿಜಿ ಮತ್ತೊಬ್ಬ ಪುತ್ರಿ ಮೋನಿಷಾ ಚಿತ್ರರಂಗಕ್ಕೆ ಡೆಬ್ಯೂ ಮಾಡಲಿದ್ದು, ವಿನಯ್​ ರಾಜಕುಮಾರ್​ಗೆ ನಾಯಕಿಯಾಗಿದ್ದಾರೆ. ಜತೆಗೆ ಎಸ್​. ನಾರಾಯಣ್​ ನಿರ್ದೇಶನದಲ್ಲಿ ಶ್ರೇಯಸ್​ ಕೆ. ಮಂಜು ಮತ್ತು ದುನಿಯಾ ವಿಜಯ್​ ನಟಿಸಿರುವ "ಮಾರುತ' ಸದ್ಯ ಪೋಸ್ಟ್​&ಪ್ರೊಡಕ್ಷನ್​ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ.