ಸಿನಿವಾಣಿ

ನಿರೀಕ್ಷೆಯ ದುನಿಯಾದಲ್ಲಿ ರಶ್ಮಿ: ಮತ್ತೆ ಅಂಥದ್ದೇ ಪಾತ್ರ ಬೇಡ

ಬೆಂಗಳೂರು: ‘ಹಲವರು ಹೆಚ್ಚೂಕಡಿಮೆ ದುನಿಯಾದ ಆ ಪಾತ್ರವನ್ನೇ ಹೋಲುವಂಥ ಕಥೆ ತರುತ್ತಿದ್ದಾರೆ. ಆದರೆ ನಾನು ಅದಕ್ಕಿಂತ ವಿಭಿನ್ನವಾದ ಪಾತ್ರಗಳ ನಿರೀಕ್ಷೆಯಲ್ಲಿದ್ದೇನೆ..’ - ಹೀಗೆನ್ನುತ್ತ ತಮ್ಮ ಹೊಸ ಸಿನಿಮಾದ ಬಗ್ಗೆ ಮಾತನಾಡಿದವರು ‘ದುನಿಯಾ’ ರಶ್ಮಿ.

ಅವರು ನಾಯಕಿ ಆಗಿ ಅಭಿನಯಿಸಿರುವ ‘ಜಗ್ಗಿ ಜಗನ್ನಾಥ್’ ಸಿನಿಮಾ ಮುಂದಿನ ಶುಕ್ರವಾರ (ಫೆ. 28) ಬಿಡುಗಡೆ ಆಗಲಿದೆ. ಓಂ ಸಾಯಿಪ್ರಕಾಶ್ ಅವರ ನಿರ್ದೇಶನ, ಲಿಖಿತ್​ರಾಜ್ ನಾಯಕನಾಗಿ ಅಭಿನಯಿಸಿರುವ ಮೊದಲ ಸಿನಿಮಾದಲ್ಲಿ ದುನಿಯಾ ರಶ್ಮಿ ನಾಯಕಿ. ಟ್ರೇಲರ್ ಹೇಳುವಂತೆ ಒಬ್ಬ ಸಾಮಾನ್ಯ ಮನುಷ್ಯ ಅಘೋರಿ ಆಗಿ ಬದಲಾದ ನೈಜ ಘಟನೆ ಆಧಾರಿತ ಈ ಸಿನಿಮಾದಲ್ಲಿ ರಶ್ಮಿ ಅವರದ್ದು ಮುಸ್ಲಿಂ ಯುವತಿಯ ಪಾತ್ರ. ‘ನಾನು ಇಲ್ಲಿ ಮುಸ್ಲಿಂ ಯುವತಿಯಾಗಿ ಕಾಣಿಸಿಕೊಂಡಿದ್ದೇನೆ. ಅದರಲ್ಲೂ ನಾನು ಇಂಥದ್ದೊಂದು ಪಾತ್ರದಲ್ಲಿ ನಟಿಸಿರುವುದು ಇದೇ ಮೊದಲು. ವಿಶೇಷವೆಂದರೆ ಈ ಸಿನಿಮಾದಲ್ಲಿ ಪಾತ್ರಕ್ಕೆ ತಕ್ಕಂತೆ ಶಾಲು ಸುತ್ತಿಕೊಂಡೇ ಇರಬೇಕಿತ್ತು. ಹೀಗಾಗಿ ಅದು ಸ್ವಲ್ಪ ಕಷ್ಟ ಎನಿಸಿತು’ ಎಂದಷ್ಟೇ ಹೇಳಿ ಪಾತ್ರದ ಬಗ್ಗೆ ಹೆಚ್ಚೇನೂ ಮಾಹಿತಿ ಬಿಟ್ಟುಕೊಡದ ಅವರು ಸಿನಿಮಾ ಬಗ್ಗೆಯೂ ಕಿಂಚಿತ್ ವಿವರವನ್ನಷ್ಟೇ ನೀಡಿದರು. ‘ಇದು ಸತ್ಯ ಘಟನೆ ಆಧಾರಿತ ಸಿನಿಮಾ. ಇದೊಂದು ವಿಭಿನ್ನ ಸಿನಿಮಾ. ಇಲ್ಲಿ ಲವ್-ಆಕ್ಷನ್ ಎಲ್ಲವೂ ಇದೆ’ ಎಂದರು.

‘ಜಗನ್ನಾಥ್’ ಬಗ್ಗೆ ಮಾತನಾಡುತ್ತ ಅವರನ್ನು ‘ದುನಿಯಾ’ದತ್ತ ‘ಜಗ್ಗಿ’ದಾಗ ಅವರು ತಮ್ಮ ಇದುವರೆಗಿನ ಸಿನಿಪ್ರಯಾಣದ ಕುರಿತು ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡರು. ‘ಆರಂಭದಲ್ಲಿ ನನಗೆ ಸ್ವಲ್ಪ ಭಯವಿತ್ತು. ಹೀಗಾಗಿ ಆಗ ಬಂದ ಪಾತ್ರಗಳನ್ನೆಲ್ಲ ಒಪ್ಪಿಕೊಂಡೆ. ಈಗ ಹಾಗಿಲ್ಲ, ಪಾತ್ರ-ಚಿತ್ರತಂಡಗಳನ್ನು ಸರಿಯಾಗಿ ಪರಿಶೀಲಿಸಿ ಅವಕಾಶಗಳಿಗೆ ಓಕೆ ಎನ್ನುತ್ತಿದ್ದೇನೆ. ಆದ್ದರಿಂದ ಎಷ್ಟೋ ಅವಕಾಶಗಳನ್ನು ನಿರಾಕರಿಸಬೇಕಾಯಿತು. ಕೆಲವುದರಲ್ಲಿ ಪಾತ್ರಗಳು ವಿಶೇಷವಾಗಿ ಇರುತ್ತಿರಲಿಲ್ಲ, ಇನ್ನು ಕೆಲವುದರಲ್ಲಿ ಪಾತ್ರ ಚೆನ್ನಾಗಿದ್ದರೂ ಚಿತ್ರತಂಡ ಅಷ್ಟೊಂದು ಸಮರ್ಥ ಇರುತ್ತಿರಲಿಲ್ಲ’ ಎಂದು ಹೇಳಿಕೊಂಡ ರಶ್ಮಿ, ದುನಿಯಾ ಹೊರತಾದ ಪಾತ್ರಗಳ ನಿರೀಕ್ಷೆಯಲ್ಲಿರುವುದನ್ನು ತಿಳಿಸಿದರು.

ರಶ್ಮಿಗೆ ಮತ್ತೆ ಸಿಕ್ಕಿತು ಅದೇ ಶುಕ್ರವಾರ

ನಿರ್ದೇಶಕ ಸೂರಿ, ನಟ ವಿಜಯ್ ಹಾಗೂ ರಶ್ಮಿ ಅವರಿಗೂ ಭಾರಿ ಯಶಸ್ಸು ತಂದುಕೊಟ್ಟಿದ್ದ ‘ದುನಿಯಾ’ ಸಿನಿಮಾ 2007ರ ಫೆಬ್ರವರಿ ಕೊನೆಯ ಶುಕ್ರವಾರ ಬಿಡುಗಡೆ ಆಗಿತ್ತು. ಆಮೇಲೆ ಮೂವರೂ ದುನಿಯಾ ಸೂರಿ, ದುನಿಯಾ ವಿಜಯ್ ಹಾಗೂ ದುನಿಯಾ ರಶ್ಮಿ ಎಂದೇ ಖ್ಯಾತರಾಗಿದ್ದಷ್ಟೇ ಅಲ್ಲ, ಈಗಲೂ ಹಾಗೇ ಕರೆಸಿಕೊಳ್ಳುತ್ತಿದ್ದಾರೆ. ಅಂಥದ್ದೇ ಯಶಸ್ಸು ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾ ‘ಸಲಗ’ಕ್ಕೂ ಸಿಗಬೇಕು ಎಂದು ದುನಿಯಾ ವಿಜಿ, ಈ ಸಲ ಫೆಬ್ರವರಿ ಕೊನೇ ಶುಕ್ರವಾರ ‘ಸಲಗ’ ತೆರೆ ಕಾಣಿಸಬೇಕು ಎಂದು ಪ್ರಯತ್ನಿಸಿದ್ದರೂ ಕಾರಣಾಂತರದಿಂದ ಆಗಲಿಲ್ಲ. ಇನ್ನು ದುನಿಯಾ ಸೂರಿ ನಿರ್ದೇಶನದ ‘ಪಾಪ್​ಕಾರ್ನ್ ಮಂಕಿ ಟೈಗರ್’ ಒಂದು ವಾರ ಮೊದಲೇ ಎಂದರೆ ಫೆ. 21ಕ್ಕೆ ಬಿಡುಗಡೆ ಆಗಿದೆ. ಆದರೆ ರಶ್ಮಿ ಅಭಿನಯದ ‘ಜಗ್ಗಿ ಜಗನ್ನಾಥ್’ ಕಾಕತಾಳೀಯ ಎಂಬಂತೆ ‘ದುನಿಯಾ’ ಚಿತ್ರ ತೆರೆ ಕಂಡ ಹಾಗೇ ಫೆಬ್ರವರಿ ಕೊನೆಯ ಶುಕ್ರವಾರವೇ ಬಿಡುಗಡೆ ಆಗುತ್ತಿದೆ. ಹೀಗಾಗಿ ರಶ್ಮಿ ಕೂಡ ಖುಷಿಯಲ್ಲಿದ್ದು, ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.