ಸಿನಿವಾಣಿ

‘ಡ್ಯೂಡ್’ ವರ್ಸಸ್ ‘ಡ್ಯೂಡ್’: ಶೀರ್ಷಿಕೆಗಾಗಿ ಕನ್ನಡ ಹಾಗೂ ತೆಲುಗು ಚಿತ್ರತಂಡ ನಡುವೆ ಶೀತಲಸಮರ

ಶಿವಮಲ್ಲಯ್ಯ ಸ್ಥಾವರಮಠ

ಬೆಂಗಳೂರು: ಟೈಟಲ್ ಕಾರಣಕ್ಕಾಗಿ ಕನ್ನಡ ಹಾಗೂ ತೆಲುಗು ಸಿನಿಮಾವೊಂದರ ನಡುವೆ ಶೀತಲ ಸಮರ ಆರಂಭವಾಗಿದೆ. ಕನ್ನಡದಲ್ಲಿ ತೇಜ್ ನಟಿಸಿ, ನಿರ್ದೇಶಿಸುತ್ತಿರುವ ‘ಡ್ಯೂಡ್’ ಚಿತ್ರವು ವರ್ಷದ ಹಿಂದೆ ಘೋಷಣೆಯಾಗಿತ್ತು. ಈ ಮಧ್ಯೆಯೇ ತೆಲುಗಿನಲ್ಲಿ ಪ್ರದೀಪ್ ರಂಗರಾಜನ್ ಅಭಿನಯಿಸುತ್ತಿರುವ ಚಿತ್ರಕ್ಕೆ ‘ಡ್ಯೂಡ್’ ಎಂದು ಹೆಸರಿಡಲಾಗಿದೆ. ಈ ಎರಡು ಸಿನಿಮಾಗಳ ಟೈಟಲ್‌ಗೆ ಒಂದೇ ಆಗಿರುವುದರಿಂದ ಆ ಕಾರಣಕ್ಕೆ ತೆಲುಗು ಸಿನಿಮಾದ ಟೈಟಲ್ ಬದಲಿಸುವಂತೆ ಕನ್ನಡದ ‘ಡ್ಯೂಡ್’ ನಿರ್ದೇಶಕ ತೇಜ್ ಆಗ್ರಹಿಸಿದ್ದು, ‘ವರ್ಷದ ಹಿಂದೆಯೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶೀರ್ಷಿಕೆಯನ್ನು ನೋಂದಾಯಿಸಿ, ಘೋಷಿಸಿದ್ದೆವು’ ಎಂದು ಸ್ಪಷ್ಟನೆ ನೀಡಿದ್ದಾರೆ. ‘ನಾವು ಒಂದು ವರ್ಷಕ್ಕೆ ಮುನ್ನವೇ ‘ಡ್ಯೂಡ್’ ಸಿನಿಮಾ ಘೋಷಣೆ ಮಾಡಿ, ಪ್ರಚಾರ ನಡೆಸಿದ್ದೇವೆ. ಪುಟ್ಬಾಲ್ ಸುತ್ತ ಕೇಂದ್ರಿಕೃತವಾದ ಈ ಚಿತ್ರದ ಶೂಟಿಂಗ್ ಅಂತಿಮ ಹಂತದಲ್ಲಿದೆ. ಏಕಕಾಲಕ್ಕೆ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ನಡೆಸುತ್ತಿದ್ದೇವೆ. ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಸಿನಿಮಾ ರಿಲೀಸ್‌ಗೆ ಸಿದ್ಧತೆ ನಡೆಸುತ್ತಿದ್ದೇವೆ. ಈ ಮಧ್ಯೆಯೇ ಮೈತ್ರಿ ಮೂವೀ ಮೇಕರ್ಸ್ ಇತ್ತೀಚೆಗೆ ‘ಡ್ಯೂಡ್’ ಎಂಬ ಶೀರ್ಷಿಕೆಯಲ್ಲಿ ಸಿನಿಮಾ ಘೋಷಿಸಿರುವುದು ನಮಗೆ ಆಘಾತ ತಂದಿದೆ. ನಾವು ಕನ್ನಡ, ತೆಲುಗು ಹಾಗೂ ಮಲಯಾಳಂನಲ್ಲಿ ಸಿನಿಮಾ ರಿಲೀಸ್ ಮಾಡುವುದರಿಂದ ನಮಗೆ ಟೈಟಲ್ ಕ್ಲ್ಯಾಷ್ ಆಗುತ್ತಿದೆ. ನಮ್ಮ ಸಿನಿಮಾದ ಕುರಿತ ವಿಚಾರಗಳನ್ನು ಮೈತ್ರಿ ಮೇಕರ್ಸ್‌ನ ಕಾರ್ಯನಿರ್ವಾಹಕ ನಿರ್ಮಾಪಕ ಅನಿಲ್ ಗಮನಕ್ಕೆ ತರಲಾಗಿದೆ. ಈ ಕುರಿತಂತೆ ಸಕರಾತ್ಮಕ ಪ್ರತಿಕ್ರಿಯೆಗೆ ನಿರೀಕ್ಷಿಸುತ್ತಿದ್ದೇವೆ’ ಎಂದು ಎನ್ನುತ್ತಾರೆ ತೇಜ್. ಅಂದಹಾಗೆ, ಕನ್ನಡದ ‘ಡ್ಯೂಡ್’ ಚಿತ್ರದಲ್ಲಿ ರಂಗಾಯಣ ರಘು, ಸನ್ಯಾ ಕಾವೇರಮ್ಮ, ಮೇಘಾ, ಮೋಹಿತ್, ಧೃತಿ, ಅನರ್ಘ್ಯ, ದಿಪಾಲಿ ಪಾಂಡೆ, ಸಿರಿ, ಇವಾಂಜೆಲಿನ್, ಸೋನು ತೀರ್ಥ ಗೌಡ್, ಯಶಸ್ವಿನಿ, ಮರ್ಸಿ ಮತ್ತು ಮೋನಿಶ್ ಅಭಿನಯಿಸಿದ್ದಾರೆ.

‘ಕಲ್ಟ್’ ರಿಪೀಟ್: ಕನ್ನಡದಲ್ಲಿ ಜೈದ್ ಖಾನ್ ಅಭಿನಯದಲ್ಲಿ ‘ಕಲ್ಟ್’ ಸಿನಿಮಾ ಸೆಟ್ಟೇರಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ಜೈದ್ ಜತೆಗೆ ರಚಿತಾ ರಾಮ್, ಮಲೈಕಾ ವಸುಪಾಲ್ ಮುಖ್ಯಭೂಮಿಕೆಯಲ್ಲಿದ್ದಾರೆ. ಕನ್ನಡದಲ್ಲಿ ‘ಕಲ್ಟ್’ ನಿರ್ಮಾಣವಾಗುತ್ತಿರುವಾಗಲೇ ತೆಲುಗಿನಲ್ಲಿ ‘ಕಲ್ಟ್’ ಎಂಬ ಟೈಟಲ್‌ನಲ್ಲಿ ಚಿತ್ರವೊಂದು ಘೋಷಣೆಯಾಗಿದೆ. ವಿಶ್ವಕ್ ಸೇನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಒಂದೇ ಟೈಟಲ್ ಸಿನಿಮಾ ಮೂಡಿಬರುತ್ತಿರುವುದರಿಂದ ವಿವಾದಕ್ಕೀಡಾಗುವ ಸಾಧ್ಯತೆಯಿದೆ.