ಸಿನಿವಾಣಿ

ಪಾನಮತ್ತಳಾಗಿ ವಾಹನ ಚಲಾಯಿಸಿ ಅಪಘಾತ, ನಟಿಯ ಬಂಧನ!

ನವದೆಹಲಿ: ಪಾನಮತ್ತಳಾಗಿ ವಾಹನ ಚಲಾಯಿಸಿ ಅಪಘಾತವೆಸಗಿದ್ದಲ್ಲದೆ, ಪೊಲೀಸ್​ಗೂ ಬೈದು ನಿಂದಿಸಿದ್ದ ಆರೋಪದ ಮೇಲೆ ನಟಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನ ಜುಹು ಪ್ರದೇಶಲ್ಲಿ ಗುರುವಾರ ತಡರಾತ್ರಿ ಈ ಅಪಘಾತ ಸಂಭವಿಸಿತ್ತು.

ತೆಲುಗು-ತಮಿಳು ಸಿನಿಮಾಗಳಲ್ಲಿ ನಟಿಸಿರುವ ಕಾವ್ಯಾ ಥಾಪರ್ ಬಂಧಿತ ನಟಿ. ಈಕೆ ಗುರುವಾರ ತಡರಾತ್ರಿ 1 ಗಂಟೆ ಸಮಯದಲ್ಲಿ ಜುಹು ಪ್ರದೇಶದ ಜೆಡಬ್ಲ್ಯು ಮ್ಯಾರಿಯೊಟ್​ ಹೋಟೆಲ್ ಬಳಿ ಕಾರು ಚಲಾಯಿಸಿಕೊಂಡು ಹೋಗುವಾಗ ಈ ಅಪಘಾತ ಸಂಭವಿಸಿದೆ.

ಪಾನಮತ್ತಳಾಗಿ ವಾಹನ ಚಲಾಯಿಸಿದ್ದಲ್ಲದೆ ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದ್ದರು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ತಕ್ಷಣ ಸ್ಥಳಕ್ಕೆ ಧಾವಿಸಿದ್ದರು. ಆಗ ಪೊಲೀಸ್​ಗೂ ಅವಾಚ್ಯ ಶಬ್ದಗಳಿಂದ ಕಾವ್ಯಾ ನಿಂದಿಸಿದ್ದು, ಆಕೆಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.