ಸಿನಿವಾಣಿ

‘ದೃಶ್ಯಂ 2’ ಕನ್ನಡ ರಿಮೇಕ್​ನಲ್ಲಿ ಮತ್ತೆ ರವಿಚಂದ್ರನ್ ಅಭಿನಯ

ಬೆಂಗಳೂರು: ಮೋಹನ್ ಲಾಲ್ ಅಭಿನಯದ ಮಲಯಾಳಂ ಚಿತ್ರ ‘ದೃಶ್ಯಂ 2’ ಎರಡು ತಿಂಗಳ ಹಿಂದೆ ಅಮೇಜಾನ್ ಪ್ರೖೆಂನಲ್ಲಿ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆ ಪಡೆದಾಗಲೇ, ಆ ಚಿತ್ರ ಕನ್ನಡಕ್ಕೂ ರೀಮೇಕ್ ಆಗುತ್ತದಾ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಏಕೆಂದರೆ, ‘ದೃಶ್ಯಂ 2’ನ ಮೂಲ ಚಿತ್ರ ‘ದೃಶ್ಯಂ’ 2013ರಲ್ಲಿ ಬಿಡುಗಡೆಯಾಗಿ ಹಿಟ್ ಆಗಿದ್ದಷ್ಟೇ ಅಲ್ಲ, ಕನ್ನಡದಲ್ಲಿ ‘ದೃಶ್ಯ’ ಹೆಸರಿನಲ್ಲಿ ರೀಮೇಕ್ ಆಗಿತ್ತು. ಹಾಗಾಗಿ, ಅದರ ಮುಂದುವರೆದ ಭಾಗ ಸಹ ಕನ್ನಡಕ್ಕೆ ರೀಮೇಕ್ ಆಗುತ್ತದಾ ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರಲ್ಲೂ ಇತ್ತು.

ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದ್ದು, ‘ದೃಶ್ಯ’ದ ಹಿಂದಿದ್ದ ತಂಡವೇ ಇದೀಗ ‘ದೃಶ್ಯ 2’ ಚಿತ್ರ ಮಾಡುತ್ತಿದೆ. ಹಾಗಂತ ಯುಗಾದಿ ಹಬ್ಬದಂದು ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಕುರಿತಾಗಿ ಒಂದು ಪೋಸ್ಟರ್ ಬಿಡುಗಡೆಯಾಗಿದೆ. ರವಿಚಂದ್ರನ್ ಮತ್ತೊಮ್ಮೆ ರಾಜೇಂದ್ರ ಪೊನ್ನಪ್ಪ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಸೋಷಿಯಲ್ ಮೀಡಿಯಾಗೆ ಎಂಟ್ರಿ: ಯುಗಾದಿ ಹಬ್ಬದಂದು ಸೋಷಿಯಲ್ ಮೀಡಿಯಾಗೆ ಅಧಿಕೃತವಾಗಿ ಎಂಟ್ರಿ ಕೊಡುವುದಾಗಿ ರವಿಚಂದ್ರನ್ ಘೋಷಿಸಿದ್ದರು. ಅದರಂತೆ, ಮಂಗಳವಾರ ಅವರು ಯೂಟ್ಯೂಬ್​ನಲ್ಲಿ ಒನ್ ಆಂಡ್ ಓನ್ಲಿ ರವಿಚಂದ್ರನ್ ಎಂಬ ಹೊಸ ಚಾನಲ್ ಪ್ರಾರಂಭಿಸಿ, ಈ ಮೂಲಕ ಸಕ್ರಿಯರಾಗಿದ್ದಾರೆ. ನಡೆದ ಬಂದ ಹಾದಿ ಸೇರದಂತೆ ಹಲವು ವಿಡಿಯೋಗಳನ್ನು ಬಿಡುಗಡೆ ಮಾಡಿರುವ ಅವರು, ಫೇಸ್​ಬುಕ್, ಟ್ವಿಟರ್ ಮತ್ತು ಇನ್​ಸ್ಟಾಗ್ರಾಂನಲ್ಲೂ ಅದೇ ಹೆಸರಿನಲ್ಲಿ ಖಾತೆ ತೆರೆದು, ಆ ಮೂಲಕ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.