ಸಿನಿವಾಣಿ

ತೊಟ್ಟಿಕ್ಕುವ ರಕ್ತ ಚಂದದ ಚಿಟ್ಟೆ ಸೂರಿ ಘಮ..

vijayavani

ಬೆಂಗಳೂರು: ಹರಿಯೋ ನೀರು.. ತೊಟ್ಟಿಕ್ಕುವ ರಕ್ತ.. ಸುರಿಯೋ ಮಳೆ.. ಗಾಳಿಯಲ್ಲಿ ತೇಲಿ ಬರುವ ಚಂದದ ಚಿಟ್ಟೆ.. ಪಿಳಿಪಿಳಿ ಕಣ್ಣು ಮಿಟುಕಿಸುವ ಕಂದಮ್ಮ.. ಮಚ್ಚು-ಹೊಡೆದಾಟ.. ಗಂಟೆ ಶಬ್ದ.. ಹೀಗೆ 1 ನಿಮಿಷ 15 ಸೆಕೆಂಡ್​ನ ಟೀಸರ್​ನಲ್ಲಿ ಕೆಲವೊಂದಿಷ್ಟು ಅಂಶಗಳನ್ನು ಮಿಶ್ರಣ ಮಾಡಿ ‘ಪಾಪ್​ಕಾರ್ನ್ ಮಂಕಿ ಟೈಗರ್’ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ ನಿರ್ದೇಶಕ ದುನಿಯಾ ಸೂರಿ.

ಶೀರ್ಷಿಕೆ ಮೂಲಕವೇ ಹೆಚ್ಚು ಸದ್ದು ಮಾಡಿದ್ದ ‘ಪಾಪ್​ಕಾರ್ನ್ ಮಂಕಿ ಟೈಗರ್’, ಫಸ್ಟ್ ಲುಕ್ ಬಿಡುಗಡೆ ಬಳಿಕ ಚಿತ್ರದ ಮೇಲಿನ ನಿರೀಕ್ಷೆಗೆ ಮತ್ತಷ್ಟು ಒಗ್ಗರಣೆ ಹಾಕಿತ್ತು. ಈಗ ಟೀಸರ್ ಹೊರಬಂದಿದೆ. ಸೂರಿಯ ಟಿಪಿಕಲ್ ರಾ ಕಂಟೆಂಟ್ ಘಮ ಎಂದಿನಂತೆ ‘ಪಾಪ್​ಕಾರ್ನ್..’ನಲ್ಲೂ ಮುಂದುವರಿದಿದೆ. ಟೀಸರ್ ಮೂಲಕ ಚಿತ್ರದಲ್ಲೇನಿದೆ ಎಂಬ ಗುಟ್ಟನ್ನು ಬಿಟ್ಟುಕೊಡದ ಸೂರಿ, ಕುತೂಹಲ ಮೂಡಿಸುವ ಕೆಲಸ ಮಾಡಿದ್ದಾರೆ.

ಒಂದೇ ಒಂದು ಡೈಲಾಗ್ ಇಲ್ಲದ ಟೀಸರ್​ನಲ್ಲಿ ಹಿನ್ನೆಲೆ ಧ್ವನಿಯೇ ವಿಚಿತ್ರ ಮತ್ತು ವಿಶಿಷ್ಟ ಅನಿಸುವಂತಿದೆ. ‘ಟಗರು’ ಚಿತ್ರದಲ್ಲಿ ಸಂಗೀತದ ಮೂಲಕವೇ ಕಮಾಲ್ ಮಾಡಿದ್ದ ಚರಣ್​ರಾಜ್, ಇಲ್ಲಿಯೂ ಹೈಲೈಟ್ ಆಗಿದ್ದಾರೆ. ಛಾಯಾಗ್ರಾಹಕ ಎಸ್.ಶೇಖರ್ ಅವರ ಕ್ಯಾಮರಾ, ಪ್ರತಿ ದೃಶ್ಯವನ್ನು ಫೋಟೋಫ್ರೇಮ್ ಎಂಬಂತೆ ಸೆರೆ ಹಿಡಿದಿದೆ. ‘ಟಗರು’ ಸಿನಿಮಾ ಬಳಿಕ ನಿರ್ದೇಶಕ ಸೂರಿ ಜತೆ ಧನಂಜಯ ಮತ್ತೆ ಸೇರಿಕೊಂಡಿದ್ದಾರೆ.

ಸದ್ಯ ಹೊರಬಂದಿರುವ ಟೀಸರ್​ನಲ್ಲಿ ಒಟ್ಟು ಮೂರು ಶೇಡ್​ಗಳಲ್ಲಿ ಡಾಲಿಯ ದರ್ಶನವಾಗಿದೆ. ಶೂಟಿಂಗ್ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವ ‘ಪಾಪ್​ಕಾರ್ನ್..’ ಚಿತ್ರ ಶೀಘ್ರದಲ್ಲಿ ತೆರೆಮೇಲೆ ಬರುವ ಮುನ್ಸೂಚನೆ ಸಿಕ್ಕಿದ್ದು, ನಿವೇದಿತಾ, ಅಮೃತಾ ಅಯ್ಯಂಗಾರ್, ಸಪ್ತಮಿ, ಸುಧೀ, ನವೀನ್ ಸೇರಿ ಹಲವರು ಪಾತ್ರವರ್ಗದಲ್ಲಿದ್ದಾರೆ. ಕೆ.ಎಂ.ಸುಧೀರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.