ಸಿನಿವಾಣಿ

ಒಂದು ಬಿಟ್ ಸಾಂಗ್‌ನಲ್ಲಿ ಇಷ್ಟೆಲ್ಲಾ ಆಗೋಕೆ ಸಾಧ್ಯನಾ?

ಒಂದು ಬಿಟ್ ಸಾಂಗ್‌ನಲ್ಲಿ ಇಷ್ಟೆಲ್ಲಾ ಆಗೋಕೆ ಸಾಧ್ಯನಾ?

ಖಂಡಿತಾ ಸಾಧ್ಯ ಅಂತ ತೋರಿಸೋಕೆ ಹೊರಟಿದ್ದಾರೆ ನಿರ್ದೇಶಕ ದಯಾಳ್ ಪದ್ಮನಾಭನ್. ಯೋಗಿ ಅಭಿನಯದಲ್ಲಿ ‘ಒಂಬತ್ತನೇ ದಿಕ್ಕು’ ಎಂಬ ಚಿತ್ರವನ್ನು ಅವರು ನಿರ್ದೇಶಿಸಿರುವುದು ಗೊತ್ತಲ್ಲಾ? ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ತಿಂಗಳೋ ಅಥವಾ ಮೇನಲ್ಲೋ ಆ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ‘ಕರೊನಾ’ದಿಂದ ಎಲ್ಲಾ ಚಟುವಟಿಕೆಗಳು ಬಂದ್ ಆಗಿರುವುದರಿಂದ, ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಈ ಮಧ್ಯೆ ಚಿತ್ರದ ಹಾಡೊಂದರ ಫೋಟೋಗಳನ್ನು ಅವರು ಶೇರ್ ಮಾಡಿದ್ದಾರೆ.

ಈ ಬಿಟ್ ಹಾಡಿನ ವಿಶೇಷತೆ ಏನು ಗೊತ್ತಾ? ಇಲ್ಲಿ ನಾಯಕ ಯೋಗಿ ಮತ್ತು ನಾಯಕಿ ಅದಿತಿ ಪ್ರಭುದೇವ ಭೇಟಿಯಾಗಿ, ಅವರಿಬ್ಬರ ಮಧ್ಯೆ ಪ್ರೀತಿ ಅರಳಿ, ಆ ಪ್ರೀತಿ ಮದುವೆಗೆ ತಿರುಗಿ, ಅವರಿಬ್ಬರೂ ತಂದೆ-ತಾಯಿಯಾಗಿ, ಆ ಮಗನಿಗೆ ಮದುವೆ ಮಾಡಿ, ಕೊನೆಗೆ ಇಬ್ಬರೂ ಗೋಡೆಯ ಮೇಲೆ ಫೋಟೋ ಫ್ರೇಮ್ ಆಗುವಲ್ಲಿ ಮುಗಿಯುತ್ತದೆ. ಒಂದು ಬಿಟ್ ಸಾಂಗ್‌ನಲ್ಲಿ ಇಷ್ಟೆಲ್ಲಾ ಆಗೋಕೆ ಸಾಧ್ಯವೇ ಎಂದರೆ, ಖಂಡಿತಾ ಎನ್ನುತ್ತಾರೆ ದಯಾಳ್.

‘ಇಲ್ಲಿ ನಾಯಕ, ನಾಯಕಿಯನ್ನು ನೋಡಿದಾಕ್ಷಣ ಇಡೀ ಜೀವನವನ್ನು ಕಲ್ಪಿಸಿಕೊಳ್ಳುತ್ತಾನೆ. ತಾನು ಲವ್ ಪ್ರಪೋಸ್ ಮಾಡುವುದರಿಂದ ಶುರುವಾಗಿ, ಅವರಿಬ್ಬರ ಜೀವನದ ಬೇರೆಬೇರೆ ಹಂತಗಳನ್ನು ಕಲ್ಪಿಸಿಕೊಳ್ಳುತ್ತಾನೆ. ಇವೆಲ್ಲಾ ಒಂದು ಬಿಟ್ ಸಾಂಗ್‌ನಲ್ಲಿ ಬರುತ್ತದೆ. ಈ ಹಾಡಿಗೆ ಸೂಕ್ತವಾದ ಸನ್ನಿವೇಶಗಳನ್ನು ಶೂಟ್ ಮಾಡುವ ಬದಲು, ಫೋಟೋಗಳ ಮೂಲಕ ತೋರಿಸುತ್ತಾ ಹೋಗುತ್ತೇವೆ. ಯೋಗಿ ಮತ್ತು ಅದಿತಿಯ ವಿವಿಧ ಗೆಟಪ್‌ಗಳ ಫೋಟೋ ಸೆಷನ್ ಮಾಡಿ, ಸನ್ನಿವೇಶಕ್ಕೆ ಸರಿಯಾಗಿ ಹೊಂದಿಸಿದ್ದೇವೆ’ ಎನ್ನುತ್ತಾರೆ ದಯಾಳ್.
ಅಂದಹಾಗೆ, ‘ಒಂಬತ್ತನೇ ದಿಕ್ಕು’ ಚಿತ್ರದ ಮೊದಲ ಕಾಪಿ ಬಂದಿದು, ಸೆನ್ಸಾರ್ ಬೋರ್ಡ್‌ಗೂ ಕಳಿಸಿಯಾಗಿದೆಯಂತೆ. ಸದ್ಯಕ್ಕೆ ಸೆನ್ಸಾರ್ ಮಂಡಳಿ ಕಾರ್ಯ ನಿರ್ವಹಿಸುತ್ತಿಲ್ಲ. ಲಾಕ್‌ಡೌನ್ ನಂತರ ಪುನಃ ಕೆಲಸಗಳು ಪ್ರಾರಂಭವಾದಾಗ, ಸೆನ್ಸಾರ್ ಮಾಡಿಸಿ, ಆ ನಂತರ ಚಿತ್ರದ ಬಿಡುಗಡೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳುತ್ತಾರೆ ದಯಾಳ್.