ಸಿನಿವಾಣಿ

ಮತ್ತೆ ಶುರು ಡ್ರಾಮಾ ಜೂನಿಯರ್ಸ್; ಪ್ರತಿ ಶನಿ-ಭಾನುವಾರ ರಾತ್ರಿ 7.30ಕ್ಕೆ

ಬೆಂಗಳೂರು: ಜೀ ಕನ್ನಡ ವಾಹಿನಿಯ ಪ್ರಮುಖ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ‘ಡ್ರಾಮಾ ಜೂನಿಯರ್ಸ್’ ಇದೀಗ ನಾಲ್ಕನೇ ಸೀಸನ್ ಮೂಲಕ ಕಿರುಪರದೆ ಮೇಲೆ ಬರಲು ಸಿದ್ಧವಾಗಿದೆ. ಇಂದಿನಿಂದ (ಮಾ. 19) ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಕಲರ್​ಫುಲ್ ವೇದಿಕೆ ಮೇಲೆ ಪುಟಾಣಿಗಳು ನಗೆಯ ಹಬ್ಬದೂಟವನ್ನು ಬಡಿಸಲಿದ್ದಾರೆ.

ಲಾಕ್​ಡೌನ್ ಬಳಿಕ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ‘ಡ್ರಾಮಾ ಜೂನಿಯರ್ಸ್’ಗೆ 15 ಸಾವಿರಕ್ಕೂ ಅಧಿಕ ಮಕ್ಕಳಿಗೆ ಆಡಿಷನ್ ಮಾಡಲಾಗಿತ್ತು. ಅದರಲ್ಲಿ ಕೆಲವರು ಆಯ್ಕೆಯಾಗಿದ್ದು, ಅವರ ನಟನಾ ಕೌಶಲವನ್ನು ಕಣ್ತುಂಬಿಕೊಳ್ಳಲು ಇದೀಗ ಸಮಯ ಒದಗಿ ಬಂದಿದೆ. ಹಲವು ವಿಶೇಷತೆಗಳೊಂದಿಗೆ ಈ ಸಲದ ‘ಡ್ರಾಮಾ ಜೂನಿಯರ್ಸ್-4’ ಮೂಡಿಬರುತ್ತಿರುವುದು ಒಂದೆಡೆಯಾದರೆ, ತೀರ್ಪಗಾರರಲ್ಲಿಯೂ ಒಂದಷ್ಟು ಬದಲಾವಣೆಗಳಾಗಿವೆ.

ಹಿಂದಿನ ಮೂರು ಸೀಸನ್​ಗಳಲ್ಲಿ ತೀರ್ಪಗಾರರಾಗಿದ್ದ ‘ಜೂಲಿ’ ಲಕ್ಷ್ಮೀ ನಾಲ್ಕನೇ ಸೀಸನ್​ನಲ್ಲೂ ಮುಂದುವರಿದರೆ, ಅವರ ಜತೆಗೆ ‘ಕ್ರೇಜಿಸ್ಟಾರ್’ ರವಿಚಂದ್ರನ್ ತೀರ್ಪಗಾರರ ಸ್ಥಾನದಲ್ಲಿ ಸಾಥ್ ನೀಡಲಿದ್ದಾರೆ. ಈಗಾಗಲೇ ಅವರ ಕಿಡ್ನಾಪ್ ಪ್ರೋಮೋಗಳು ವೈರಲ್ ಆಗಿ ಮೆಚ್ಚುಗೆ ಪಡೆದಿವೆ. ಈ ಇಬ್ಬರು ಘಟಾನುಘಟಿಗಳ ಜತೆಗೆ 10 ವರ್ಷಗಳ ಬಳಿಕ ಜೀ ಕನ್ನಡ ವಾಹಿನಿಗೆ ಮರಳುತ್ತಿದ್ದಾರೆ ನಟಿ ರಚಿತಾ ರಾಮ್ ಮಾತಿನ ಮಲ್ಲ ಮಾಸ್ಟರ್ ಆನಂದ್ ಎಂದಿನಂತೆ ನಿರೂಪಕರಾಗಿ ಈ ಸೀಸನ್​ನಲ್ಲೂ ಕಾರ್ಯನಿರ್ವಹಿಸಲಿದ್ದಾರೆ.