ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ಡಾ.ವಿಷ್ಣುವರ್ಧನ್ ಸ್ಮಾರಕ ನೆಲಸಮಗೊಳಿಸಿರುವ ವಿಚಾರವು ವಿಷ್ಣು ಅಭಿಮಾನಿಗಳನ್ನು ಕೆರಳಿಸಿತ್ತು. ಅಭಿಮಾನದ ಸಂಕೇತದಂತಿರುವ ಸ್ಮಾರಕವನ್ನು ಅದೇ ಸ್ಥಳದಲ್ಲಿ ಪುನರ್ ಸ್ಥಾಪಿಸಬೇಕು ಎಂಬ ಒತ್ತಾಯವು ಇಡೀ ರಾಜ್ಯಾದ್ಯಂತ ಕೇಳಿಬಂದಿತ್ತು. ಹಾಗೆಯೇ ಜತೆಗೆ ಕನ್ನಡ ಚಿತ್ರರಂಗದಲ್ಲಿ ನಾಲ್ಕು ದಶಕಗಳ ಕಲಾ ಸೇವೆಯನ್ನು ಪರಿಗಣಿಸಿ ವಿಷ್ಣುವರ್ಧನ್‌ಗೆ ‘ಕರ್ನಾಟಕ ರತ್ನ’ ನೀಡಿ ರಾಜ್ಯ ಸರ್ಕಾರ ಗೌರವ ಸಲ್ಲಿಸಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಇದಕ್ಕೆ ಪೂರಕವೆಂಬಂತೆ ವಿಷ್ಣು ಪತ್ನಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಇದರ ಬಳಿಕ ನಟಿಯರಾದ ಜಯಮಾಲಾ, ತಾರಾ ಅನುರಾಧ, ಶ್ರುತಿ, ಮಾಳವಿಕಾ ಕೂಡ ಸಿಎಂ, ಡಿಸಿಎಂರನ್ನು ಭೇಟಿ ಮಾಡಿ, ವಿಷ್ಣುವರ್ಧನ್ ಹಾಗೂ ಬಿ.ಸರೋಜಾ ದೇವಿ ಇಬ್ಬರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದ್ದರು. ಈ ಅಭಿಮಾನದ ಕೂಗಿಗೆ ರಾಜ್ಯಸರ್ಕಾರ ಸ್ಪಂದಿಸಿದ್ದು, ನಟ ಡಾ.ವಿಷ್ಣುವರ್ಧನ್ ಹಾಗೂ ಹಿರಿಯ ನಟಿ ಬಿ.ಸರೋಜಾ ದೇವಿ ಅವರಿಗೆ ‘ಮರಣೋತ್ತರ ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಘೋಷಿಸಿದೆ. ಈ ಶುಭ ಸುದ್ದಿಯನ್ನು ಕನ್ನಡ ಚಲನಚಿತ್ರ ನಟ-ನಟಿಯರು ಸಂಭ್ರಮಿಸಿದ್ದಾರೆ.
ವಿಷ್ಣುವರ್ಧನ್ ಸರ್ ನಮ್ಮ ಬದುಕಿನ ಭಾಗವಾಗಿದ್ದರು. ಇನ್ನು ಬಿ.ಸರೋಜಾದೇವಿ ಅಮ್ಮ ಕಲಾ ಸರಸ್ವತಿ. ಈ ಇಬ್ಬರು ನನ್ನ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ‘ಕರ್ನಾಟಕ ರತ್ನ’ ಈ ಇಬ್ಬರಿಗೆ ಸಲ್ಲಬೇಕಾದ ಗೌರವ ಎಂದು ಭಾವಿಸಿ ನಾನು ಹಾಗೂ ಶ್ರುತಿ, ಜಯಮಾಲಾ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಇದಕ್ಕೆ ಸರ್ಕಾರ ಸ್ಪಂದಿಸಿರುವುದು ಖುಷಿ ತಂದಿದೆ. ‘ಕರ್ನಾಟಕ ರತ್ನ’ ವಿಷ್ಣು ಸರ್ ಹುಟ್ಟುಹಬ್ಬಕ್ಕೆ ಈ ಬಾರಿಯ ಉಡುಗೊರೆ ಎನ್ನಬಹುದು. ಸೆ.18ರೊಳಗೆ ನಡೆಯುವ ಏಕೈಕ ಸಚಿವ ಸಂಪುಟ ಸಭೆ ಇದಾಗಿರುವುದು ನಾವು ಕೂಡ ಒತ್ತಡದ ಹಾಕಿದ್ದೆವು. ಇನ್ನು ಈ ಗೌರವ ಸಲ್ಲಲು ತುಂಬಾ ತಡವಾಯಿತು ಎನ್ನುವುದಕ್ಕಿಂತ ಈಗ ಪ್ರಶಸ್ತಿ ನೀಡಿರುವುದನ್ನೇ ಸಂಭ್ರಮಿಸೋಣ ಅಷ್ಟೇ.
ಮಾಳವಿಕಾ ಅವಿನಾಶ್, ನಟಿ
16 ವರ್ಷಗಳಿಂದ ‘ಕರ್ನಾಟಕ ರತ್ನ’ ನೀಡಿ ಎಂದು ಯಾರು ಕೇಳಿರಲಿಲ್ಲ. ಆದರೆ, ನಾವು ಸರ್ಕಾರದ ಬಳಿ ಮನವಿ ಮಾಡಿದ್ದೆವು. ಇದೀಗ ಪ್ರಶಸ್ತಿ ನೀಡಿರುವುದು ತುಂಬಾ ಖುಷಿ ನೀಡಿದೆ. ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವೆ. ಪ್ರಶಸ್ತಿಗಾಗಿ ಇಷ್ಟು ವರ್ಷ ಕಾದಿದ್ದೇವೆ ಅಂತನೇಲ್ಲ. ಈ ಬಾರಿ ಪ್ರಯತ್ನಕ್ಕೆ ಲ ಸಿಕ್ಕಿದೆ. ಈ ಮೂಲಕ ವಿಷ್ಣುವರ್ಧನ್ ಅವರಿಗೆ ಸರಿಯಾದ ನ್ಯಾಯ ಸಿಕ್ಕಿದೆ. ಇದನ್ನು ಇಡೀ ಚಿತ್ರರಂಗ ಸಂಭ್ರಮಿಸಬೇಕು.
ಜಯಮಲಾ, ನಟಿ
ವಿಷ್ಣುವರ್ಧನ್ ಸರ್ ಅವರು ಯಾವತ್ತೂ ಯಾವುದರ ಹಿಂದೆಯೂ ಹೋದವರಲ್ಲ. ಅದು ತಾನಾಗಿಯೇ ಬರಬೇಕು ಎಂದು ನಂಬಿಕೆಯಿಟ್ಟಿದ್ದರು. ಅಂತೆಯೇ ಇದೀಗ ‘ಕರ್ನಾಟಕ ರತ್ನ’ ಗೌರವ ಕೂಡ ತಾನಾಗಿಯೇ ಹುಡುಕಿಕೊಂಡು ಬಂದಿದೆ. ನಿಜಕ್ಕೂ ತುಂಬಾ ಸಂತೋಷದ ಸುದ್ದಿ. ಇನ್ನು ಸ್ಮಾರಕ ಎನ್ನುವುದು ಅಭಿಮಾನಿಗಳ ಭಾವನೆಯ ಸಂಕೇತ ಹಾಗೂ ಸಾಮೂಹಿಕ ನೆನಪು. ಅದಕ್ಕೆ ಸಂಬಂಧಪಟ್ಟವರು ಅದಕ್ಕೂ ಒಂದು ದಿನ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಸದ್ಯ ‘ಕರ್ನಾಟಕ ರತ್ನ’ದ ಸಂಭ್ರಮವನ್ನು ಗೌರವಿಸೋಣ. ಸರೋಜಾದೇವಿ ಅವರಿಗೆ ಪ್ರಶಸ್ತಿ ನೀಡಿರುವುದು ಚಿತ್ರರಂಗದ ಖುಷಿ ಹೆಚ್ಚಿಸಿದೆ.
ರಮೇಶ್ ಅರವಿಂದ, ನಟ
ನಾನು ಇಸ್ಕಾನ್ ದೇವಾಲಯದಲ್ಲಿರುವಾಗಲೇ ವಿಷ್ಣು ಸರ್‌ಗೆ ‘ಕರ್ನಾಟಕ ರತ್ನ’ ಸುದ್ದಿ ಕೇಳಿ ತುಂಬಾ ಸಂಭ್ರಮಪಟ್ಟೆ. ನಿಜಕ್ಕೂ ಇದು ನಿಜವಾದ ಭಗವಂತನ ಆಶೀರ್ವಾದ. ನಾವು ಕೂಡ ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡಿದ್ದು, ಭಗವಂತ ನೀಡಿದ ಪ್ರೇರಣೆಯಂತಿತ್ತು. ಇದೊಂದು ರೋಮಾಂಚನ ಕ್ಷಣ. ಇನ್ನು ವಿಷ್ಣು ಸರ್ ಹಾಗೂ ನನ್ನ ಹುಟ್ಟುಹಬ್ಬ ಒಂದೇ ದಿನ. ಈ ಬಾರಿಯ ಹುಟ್ಟುಹಬ್ಬದ ಖುಷಿ ಮತ್ತಷ್ಟು ಸಂತೋಷವಾಗಿರಲಿದೆ. ವಿಷ್ಣು ಸರ್‌ಗೆ ಶಾಶ್ವತ ಸ್ಥಾನಮಾನದ ಗರಿ ನೀಡಿರುವುದಕ್ಕೆ ಸರ್ಕಾರಕ್ಕೆ ನಾನು ಧನ್ಯವಾದ ಸಲ್ಲಿಸುತ್ತೇನೆ.
ಶ್ರುತಿ, ನಟಿ
ಹೃದಯದಿಂದ ಬಂದ ಖುಷಿ ಇದು. ಇದಕ್ಕೆ ಪಾರವೇ ಇಲ್ಲ. ತಡವಾಗಿಯಾದರೂ ಎಲ್ಲವೂ ಒಳ್ಳೆಯದಾಗುತ್ತದೆ. ಅಮ್ಮ ತುಂಬಾ ಖುಷಿಯಾಗಿದ್ದಾರೆ. ಅಮ್ಮ ಈ ಗೌರವವನ್ನು ಅಭಿಮಾನಿಗಳಿಗೆ ಅರ್ಪಿಸಿದ್ದಾರೆ. ಈ ಬಾರಿಯ 75ನೇ ಹುಟ್ಟುಹಬ್ಬದ ಸಂಭ್ರಮ ಹೆಚ್ಚಲಿದೆ.
ಕೀರ್ತಿ ವಿಷ್ಣುವರ್ಧನ್, ಪುತ್ರಿ