ಸಿನಿವಾಣಿ

ಪರಭಾಷಾ ನಟರಿಗೂ ಇಷ್ಟ ಡಾ. ರಾಜ್ ಚಿತ್ರಗಳು

ಡಾ. ರಾಜಕುಮಾರ್ ಅಭಿನಯದ ‘ಅನುರಾಗ ಅರಳಿತು’ ಚಿತ್ರವು ಆರು ಭಾಷೆಗಳಿಗೆ ರೀಮೇಕ್ ಆಗಿರುವುದು ಗೊತ್ತೇ ಇದೆ. ಇದೊಂದೇ ಅಲ್ಲ, ರಾಜ್ ಅಭಿನಯದ ಇನ್ನೂ ಹಲವು ಕನ್ನಡ ಚಿತ್ರಗಳು ಬೇರೆ ಭಾಷೆಗಳಿಗೆ, ಅಲ್ಲಿನ ಜನಪ್ರಿಯ ನಟರ ಅಭಿನಯದಲ್ಲಿ ರೀಮೇಕ್ ಆಗಿವೆ. ‘ಭಕ್ತ ಕುಂಬಾರ’, ‘ಶಂಕರ್ ಗುರು’, ‘ಚಲಿಸುವ ಮೋಡಗಳು’, ‘ಸನಾದಿ ಅಪ್ಪಣ್ಣ’, ‘ತಾಯಿಗೆ ತಕ್ಕ ಮಗ’, ‘ಪ್ರೇಮದ ಕಾಣಿಕೆ’, ‘ಎರಡು ಕನಸು’, ‘ಗಂಧದ ಗುಡಿ’, ‘ಬಾಳು ಬೆಳಗಿತು’, ‘ಕಸ್ತೂರಿ ನಿವಾಸ’, ‘ಕುಲ ಗೌರವ’, ‘ಕಣ್ತೆರೆದು ನೋಡು’, ‘ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ’, ‘ನಾ ನಿನ್ನ ಮರೆಯಲಾರೆ’ ಮುಂತಾದ ಹಲವು ಚಿತ್ರಗಳು ಪರಭಾಷೆಗಳಿಗೆ ರೀಮೇಕ್ ಆಗಿವೆ.

ಎನ್.ಟಿ. ರಾಮರಾವ್, ಅಕ್ಕಿನೇನಿ ನಾಗೇಶ್ವರ ರಾವ್, ಶಿವಾಜಿ ಗಣೇಶನ್, ಪ್ರೇಂ ನಜೀರ್, ಕೃಷ್ಣ, ಶೋಭನ್ ಬಾಬು, ಎಂ.ಜಿ. ರಾಮಚಂದ್ರನ್, ರಜನಿಕಾಂತ್, ಅಮಿತಾಭ್ ಬಚ್ಚನ್, ಸಂಜೀವ್ ಕುಮಾರ್, ಧಮೇಂದ್ರ, ಚಿರಂಜೀವಿ, ಅನಿಲ್ ಕಪೂರ್ ಸೇರಿದಂತೆ ಹಲವು ಜನಪ್ರಿಯ ನಟರು ರಾಜಕುಮಾರ್ ಅವರ ಚಿತ್ರಗಳ ರೀಮೇಕ್​ನಲ್ಲಿ ನಟಿಸಿದ್ದಾರೆ. ಈ ಪೈಕಿ, ‘ಕಸ್ತೂರಿ ನಿವಾಸ’ ಚಿತ್ರದ ಕಥೆಯನ್ನು ಮೊದಲು ಶಿವಾಜಿ ಗಣೇಶನ್ ಅವರಿಗೆ ಹೇಳಲಾಗಿತ್ತಂತೆ.

ಆದರೆ, ಗೊಂದಲದಿಂದ ಶಿವಾಜಿ ಗಣೇಶನ್ ಆ ಚಿತ್ರ ಒಪ್ಪಿರಲಿಲ್ಲ. ಕೊನೆಗೆ ಆ ಕಥೆಗೆ ರಾಜಕುಮಾರ್ ಜೀವ ಕೊಟ್ಟಿದ್ದಾರೆ. ಕನ್ನಡದಲ್ಲಿ ಚಿತ್ರ ಯಶಸ್ವಿಯಾದ ಮೇಲೆ ಆ ಚಿತ್ರವನ್ನು ಶಿವಾಜಿ ಗಣೇಶನ್, ‘ಅವನ್​ದಾನ್ ಮನಿದಾನ್’ ಎಂಬ ಹೆಸರಿನಲ್ಲಿ ತಮಿಳಿಗೆ ರೀಮೇಕ್ ಮಾಡಿದ್ದಾರೆ.