ಸಿನಿವಾಣಿ

ಹೆಚ್ಚಾಯ್ತಾ ನಟಿ ಸಾಯಿಪಲ್ಲವಿ ಸಂಭಾವನೆ..?

ಟಾಲಿವುಡ್ ನಿರ್ದೇಶಕ ತೇಜ ಶಾಕ್ ಆಗಿದ್ದಾರೆ. ಅದಕ್ಕೆ ಕಾರಣವಾಗಿದ್ದು ಸಾಯಿಪಲ್ಲವಿ ಸಂಭಾವನೆ. ವಿಷಯ ಏನೆಂದರೆ, ತೆಲುಗಿನ ಜನಪ್ರಿಯ ನಟ ಗೋಪಿಚಂದ್ ಮತ್ತು ರಾಣಾ ದಗ್ಗುಬಾಟಿ ಅಭಿನಯದಲ್ಲಿ ತೇಜ ಒಂದು ಸಿನಿಮಾ ಮಾಡುತ್ತಿದ್ದಾರೆ. ‘ಅಲಿವೇಲು ವೆಂಕಟರಮಣ’ ಎಂಬುದು ಅದರ ಹೆಸರು. ಈ ಚಿತ್ರದ ನಾಯಕಿ ಪಾತ್ರವನ್ನು ಸಾಯಿಪಲ್ಲವಿ ಮಾಡಿದರೆ ಚೆನ್ನ ಎಂದು ತೇಜಗೆ ಅನಿಸಿತ್ತಂತೆ. ಸರಿ ನೇರವಾಗಿ ಭೇಟಿ ಮಾಡಿ, ಕಥೆ ಹೇಳಿದ್ದಾರೆ. ಸಂಭಾವನೆ ಎಷ್ಟು ಕೊಡಬೇಕು ಎಂದು ಕೇಳಿದ್ದಾರೆ. ಸಾಯಿಪಲ್ಲವಿ ಹೇಳಿದ ಮೊತ್ತ ಕೇಳಿ ಅವರು ಶಾಕ್ ಆದರಂತೆ. ಏಕೆಂದರೆ, ಇದಕ್ಕೂ ಮುನ್ನ ಸಾಯಿಪಲ್ಲವಿ ಒಂದು ಚಿತ್ರಕ್ಕೆ 70 ಅಥವಾ 80 ಲಕ್ಷ ಪಡೆಯುತ್ತಿದ್ದರಂತೆ. ಇದೀಗ ಈ ಚಿತ್ರಕ್ಕೆ ಒಂದು ಕೋಟಿ 15 ಲಕ್ಷ ಕೇಳಿದ್ದಾರೆ.

ಅಂದರೆ, ಒಂದೇ ಚಿತ್ರಕ್ಕೆ ಆಕೆಯ ಸಂಭಾವನೆ 35-50 ಲಕ್ಷದಷ್ಟು ಹೆಚ್ಚಾಗಿದೆ. ಇದನ್ನು ಕೇಳಿದಾಗ ಯಾರಿಗೆ ತಾನೇ ಶಾಕ್ ಆಗುವುದಿಲ್ಲ ಹೇಳಿ? ‘ಸರಿ, ನೋಡೋಣ ತಡೆಯಮ್ಮಾ ...’ ಎಂದಷ್ಟೇ ಹೇಳಿ ತೇಜ ವಾಪಸಾಗಿದ್ದಾರೆ. ಒಂದು ಕಡೆ, ಆ ಪಾತ್ರಕ್ಕೆ ಸಾಯಿಪಲ್ಲವಿ ಹೇಳಿ ಮಾಡಿಸಿರುವುದರಿಂದ ಆಕೆಯನ್ನು ಬಿಡುವಂತೆಯೂ ಇಲ್ಲ. ಇನ್ನೊಂದು ಕಡೆ ಆಕೆ ಕೇಳಿದಷ್ಟು ಸಂಭಾವನೆಯನ್ನೂ ಕೊಡುವಂತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಏನು ಮಾಡ್ತಾರೆ ತೇಜ? ನೋಡೋಣ ಇರಿ. -ಏಜನ್ಸೀಸ್