ಬಾಲಿವುಡ್ನಲ್ಲಿ ರಾಮಾಯಣಕ್ಕೆ ಭರ್ಜರಿ ಡಿಮಾಂಡ್ ಬಂದಿದೆ. ಈಗಾಗಲೇ ದಿಗಂತ್, ರಾಮನಾಗಿ ನಟಿಸಿರುವ ‘ರಾಮ್ ಯುಗ್’ ವೆಬ್ಸಿರೀಸ್ ಓಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಪ್ರಭಾಸ್ ಅಭಿನಯದಲ್ಲಿ ರಾಮಾಯಣವನ್ನಾಧರಿಸಿ ‘ಆದಿಪುರುಷ್’ ಎಂಬ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಲಿದೆ. ಇದರ ಮಧ್ಯೆಯೇ, ರಾಮಾಯಣವನ್ನು ಆಧರಿಸಿದ ಇನ್ನೊಂದು ಚಿತ್ರದಲ್ಲಿ ಮಹೇಶ್ ಬಾಬು ರಾಮನಾಗಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಕೇಳಿಬರುತ್ತಿದೆ. ಹಿಂದಿಯಲ್ಲಿ ‘ರಣ್’, ‘ಕ್ವೀನ್’, ‘ಸೂಪರ್ 30’ ಸೇರಿ ಹಲವು ಚಿತ್ರಗಳನ್ನು ನಿರ್ವಿುಸಿರುವ ಮಧು ಮಂಟೇನಾ, ಈಗ ರಾಮಾಯಣವನ್ನು ತೆರೆಗೆ ತರುವುದಕ್ಕೆ ಯೋಚಿಸುತ್ತಿದ್ದು, ಅದು ‘ಆದಿಪುರುಷ್’ಗಿಂಥ ದೊಡ್ಡ ಬಜೆಟ್ನಲ್ಲಿ ಮತ್ತು ಅದ್ದೂರಿಯಾಗಿ ಮೂಡಿಬರಲಿದೆಯಂತೆ.
ಈ ಚಿತ್ರ ಸಹ ಇನ್ನೊಂದು ಪ್ಯಾನ್ ಇಂಡಿಯಾ ಚಿತ್ರವಾಗಲಿದ್ದು, ರಾಮನಾಗಿ ಮಹೇಶ್ ಬಾಬು ಕಾಣಿಸಿಕೊಂಡರೆ, ರಾವಣನಾಗಿ ಹೃತಿಕ್ ರೋಶನ್ ನಟಿಸುವ ಸಾಧ್ಯತೆ ಇದೆಯಂತೆ. ಇನ್ನು, ಸೀತೆಯಾಗಿ ನಟಿಸುವುದಕ್ಕೆ ಕರೀನಾ ಕಪೂರ್ಗೆ ಆಫರ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮುನ್ನ, ಸೀತೆಯ ಪಾತ್ರಕ್ಕೆ ದೀಪಿಕಾ ಪಡುಕೋಣೆ ಅವರ ಹೆಸರು ಕೇಳಿಬಂದಿತ್ತು. ಆಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಛಡ್ಡಾ’ ಚಿತ್ರದಲ್ಲಿ ನಟಿಸಿದ ನಂತರ, ಕರೀನಾ ಯಾವೊಂದು ಚಿತ್ರವನ್ನೂ ಒಪ್ಪಿಕೊಂಡ ಸುದ್ದಿಯಿಲ್ಲ. ಸದ್ಯ ಎರಡನೆಯ ಮಗುವಿನ ಪೋಷಣೆಯಲ್ಲಿ ತೊಡಗಿಸಿಕೊಂಡಿರುವ ಕರೀನಾ, ಇನ್ನೂ ಕೆಲವು ತಿಂಗಳುಗಳ ಕಾಲ ಅಭಿನಯದಿಂದ ದೂರ ಉಳಿದರೂ ಆಶ್ಚರ್ಯವಿಲ್ಲ. ಹೀಗಿರುವಾಗಲೇ ಕರೀನಾ ಹೆಸರಿನಲ್ಲೊಂದು ಗಾಳಿಸುದ್ದಿ ಕೇಳಿಬರುತ್ತಿದೆ. -ಏಜೆನ್ಸೀಸ್