ಸಿನಿವಾಣಿ

ಚಿತ್ರರಂಗಕ್ಕೆ ಆಮೀರ್ ಗುಡ್​ಬೈ?; ಹೀಗೊಂದು ಗೊಂದಲದಲ್ಲಿ ಬಾಲಿವುಡ್ ನಟ

ನಟ-ನಿರ್ಮಾಪಕನಾಗಿ ದೊಡ್ಡ ಹೆಸರು ಮಾಡಿರುವ ಆಮೀರ್ ಖಾನ್, ಚಿತ್ರರಂಗಕ್ಕೆ ಗುಡ್​ಬೈ ಹೇಳುತ್ತಾರಾ? ಇಂಥದ್ದೊಂದು ಗೊಂದಲ ಬಾಲಿವುಡ್​ನಲ್ಲಿದೆ. ಅದಕ್ಕೆ ಕಾರಣ, ಆಮೀರ್ ಮಾತುಗಳು. ಇತ್ತೀಚೆಗೆ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಆಮೀರ್ ಖಾನ್, ಚಿತ್ರರಂಗಕ್ಕೆ ಗುಡ್​ಬೈ ಹೇಳುವ ಕುರಿತು ಸುಳಿವು ಕೊಟ್ಟಿದ್ದಾರೆ.

‘ಇಷ್ಟು ವರ್ಷ ಚಿತ್ರರಂಗದಲ್ಲೇ ಮುಳುಗಿ ಹೋಗಿದ್ದೆ. ನನ್ನ ಮಕ್ಕಳಿಗೇನು ಬೇಕು, ಅವರಿಗೇನು ಇಷ್ಟ ಇದ್ಯಾವುದೂ ನನಗೆ ಗೊತ್ತಿಲ್ಲ. ಒಂದು ಹಂತದಲ್ಲಿ ನನಗೆ ನನ್ನ ತಪ್ಪಿನ ಅರಿವಾದಾಗ ಬಹಳ ಸಿಟ್ಟು ಬಂತು. ನನ್ನ ಮತ್ತು ನನ್ನ ಕುಟುಂಬದವರ ನಡುವೆ ಈ ಬಿರುಕು ಮೂಡಿಸಿದ್ದೇ ಈ ಸಿನಿಮಾ. ಅದೇ ಕಾರಣಕ್ಕೆ ಇನ್ನು ಮುಂದೆ ನಾನು ನಟಿಸುವುದಿಲ್ಲ, ನಿರ್ವಣವನ್ನೂ ಮಾಡುವುದಿಲ್ಲ ಎಂದು ನನ್ನ ಕುಟುಂಬದವರಿಗೆ ಸ್ಪಷ್ಟವಾಗಿ ಹೇಳಿಬಿಟ್ಟಿದ್ದೇನೆ’ ಎನ್ನುತ್ತಾರೆ ಆಮೀರ್.

ಕೆಲವು ತಿಂಗಳುಗಳ ಹಿಂದೆಯೇ ಈ ವಿಷಯವನ್ನು ಜಗಜ್ಜಾಹೀರು ಮಾಡಬೇಕು ಎಂದು ಅವರು ಯೋಚಿಸಿದ್ದರಂತೆ. ಆದರೆ, ಗಿಮಿಕ್ ಮಾಡುತ್ತಿದ್ದಾನೆ ಎಂದು ಅಂದುಕೊಳ್ಳುವ ಸಾಧ್ಯತೆ ಇದೆ ಎಂದು ಸುಮ್ಮನಾದರಂತೆ. ‘ಈ ಸಂದರ್ಭದಲ್ಲಿ ನಾನು ನಿವೃತ್ತಿ ಬಗ್ಗೆ ಹೇಳಿದರೆ, ‘ಲಾಲ್ ಸಿಂಗ್ ಛಡ್ಡಾ’ ಬಿಡುಗಡೆಗಾಗಿ ಈ ತರಹ ಗಿಮಿಕ್ ಮಾಡುತ್ತಿದ್ದಾನೆ ಎಂದು ಜನ ಅಂದುಕೊಳ್ಳುವ ಸಾಧ್ಯತೆ ಇದೆ. ಹೇಗೂ ನನ್ನ ಪ್ರತಿ ಚಿತ್ರ ಬಿಡುಗಡೆಯಾಗುವುದಕ್ಕೂ ಮೂರ್ನಾಲ್ಕು ವರ್ಷಗಳಾದರೂ ಬೇಕು. ‘ಲಾಲ್ ಸಿಂಗ್ ಛಡ್ಡಾ’ ಬಿಡುಗಡೆಯಾಗಿ ಮೂರ್ನಾಲ್ಕು ವರ್ಷ ಕಾಲ ಯಾರೂ ನನ್ನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆಗ ನಾನು ಸದ್ದಿಲ್ಲದೆ ಹಿಂದೆ ಸರಿಯಬಹುದು’ ಎಂದು ಹೇಳಿಕೊಂಡಿದ್ದಾರೆ ಆಮೀರ್.

ಅವರ ಈ ನಿರ್ಧಾರ ಕೇಳಿ ಮನೆಯವರು ಬಹಳ ಬೇಸರಗೊಂಡರಂತೆ. ಅದರಲ್ಲೂ ಮಾಜಿ ಪತ್ನಿ ಕಿರಣ್ ರಾವ್ ಕಣ್ಣೀರು ಹಾಕಿದರಂತೆ. ‘ಕಿರಣ್ ಮತ್ತು ನನ್ನ ಮಕ್ಕಳು ಸಮಾಧಾನ ಮಾಡುವುದಕ್ಕೆ ಪ್ರಯತ್ನ ಮಾಡಿದರು. ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ನಡುವೆ ಬ್ಯಾಲೆನ್ಸ್ ಕಂಡುಕೊಳ್ಳಬೇಕು ಎಂದು ಅರ್ಥ ಮಾಡಿಸಿದರು. ಈ ಸಂದರ್ಭದಲ್ಲಿ ನನಗೆ ಬಹಳ ನೆರವಾದವರು ಕಿರಣ್ ರಾವ್. ಅವರು ಯಾವುದೇ ಕಾರಣಕ್ಕೂ ನನ್ನ ಈ ನಿರ್ಧಾರವನ್ನು ಒಪ್ಪುತ್ತಿಲ್ಲ. ಆದರೆ, ಮಾನಸಿಕವಾಗಿ ನಾನು ನಟನೆಯಿಂದ ದೂರಾಗಿದ್ದೇನೆ’ ಎನ್ನುತ್ತಾರೆ ಆಮೀರ್.