ಬೆಂಗಳೂರು: ಉದಾರ ಸೇವಾ ಮನೋಭಾವ ‘ದೊಡ್ಮನೆ’ ಕುಟುಂಬದ ದೊಡ್ಡ ಗುಣ. ಡಾ.ರಾಜಕುಮಾರ್ ಹಾಗೂ ಪುತ್ರರು ಇದೇ ಹಾದಿಯಲ್ಲಿ ನಡೆದವರು. ಒಂದು ಕೈಯಿಂದ ನೀಡಿದ್ದನ್ನು, ಇನ್ನೊಂದು ಕೈಗೆ ಗೊತ್ತಾಗದಂತೆ ನೋಡಿಕೊಂಡವರು. ಪುನೀತ್ ರಾಜಕುಮಾರ್ ಮಾಡಿದ ದಾನ, ಧರ್ಮಗಳು, ಸಾಮಾಜಿಕ ಸೇವಾ ಕಾರ್ಯಗಳು ಯಾರಿಗೂ ತಿಳಿದಿರಲಿಲ್ಲ. ನಿಧನರಾದಾಗ ಒಂದೊಂದೇ ವಿಷಯ ಬೆಳಕಿಗೆ ಬರತೊಡಗಿತು. ‘ದೊಡ್ಮನೆ’ ಕುಟುಂಬದ ಈ ಸೇವಾ ಗುಣವನ್ನು 1971ರಲ್ಲಿಯೇ ನಿರ್ದೇಶಕರಾದ ದೊರೈ-ಭಗವಾನ್ ‘ಕಸ್ತೂರಿ ನಿವಾಸ’ ಚಿತ್ರದ ಮೂಲಕ ತೋರಿಸಿದ್ದಾರೆ. ‘ಎಷ್ಟೇ ಕಷ್ಟಗಳು ಬಂದರೂ ಕೊನೆಯವರೆಗೂ ನಮ್ಮ ಕೈ ಭೂಮಿ ನೋಡುತ್ತದೆಯೇ ವಿನಃ ಆಕಾಶವನ್ನಲ್ಲ’ ಎಂಬ ಅಣ್ಣಾವ್ರ ಡೈಲಾಗ್ ಮತ್ತೆ ಮತ್ತೆ ಕಾಡುತ್ತದೆ. ಇದು ಡಾ.ರಾಜಕುಮಾರ್ ಅವರ ವ್ಯಕ್ತಿತ್ವದ ಅಂತರಂಗವನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟ ಸಿನಿಮಾ ಎನ್ನಬಹುದು. ಶ್ರೀಮಂತಿಕೆ ಎಂಬುದು ಕೇವಲ ಗಳಿಸುವುದು ಮಾತ್ರವಲ್ಲ, ಬದಲಾಗಿ ಒಳ್ಳೆತನದ ಮೂಲಕ ಜನರನ್ನು ಪಡೆಯವುದು ಎಂಬುದನ್ನು ಸಾರುತ್ತದೆ. ಹಿರಿಯರು ನಡೆದು ಬಂದ ಹಾದಿಯ ಆದರ್ಶಗಳ ಮೇಲೆ ಇದು ಬೆಳಕು ಚೆಲ್ಲುತ್ತದೆ. ರಾಜಕುಮಾರ್ ಇಲ್ಲಿ ರವಿವರ್ಮಾ ಎಂಬ ಉದ್ಯಮಿಯ ಪಾತ್ರದಲ್ಲಿ ನಟಿಸಿದ್ದಾರೆ. ತೀರಿಹೋದ ಹೆಂಡತಿ ಹಾಗೂ ಮಗಳ ಹೆಸರಿನಲ್ಲಿಯೇ ಕಾರ್ಮಿಕರಿಗೆ, ಊರಿನ ಬಡಜನರಿಗೆ ದಾನ ಮಾಡುತ್ತಿರುತ್ತಾರೆ. ಇಂತಹ ರವಿವರ್ಮಾ ಉದ್ಯಮ ಮುಂದೊಂದು ದಿನ ಬುಡಮೇಲಾಗುತ್ತದೆ. ಕೊನೆಗೆ ಅವರು ಗುಡಿಸಲಿಗೆ ಬರುವಂತಾಗುತ್ತದೆ. ಗುಡಿಸಲಿನಲ್ಲಿದ್ದರೂ ತಮ್ಮ ದಾನವನ್ನು ಮರೆಯುವುದಿಲ್ಲ. ಇದು ಚಿತ್ರದ ಕಥೆ. ಈ ಕಥೆಯನ್ನು ಜಿ.ಬಾಲಸುಬ್ರಮಣಿಯಂ ಅವರು ಖ್ಯಾತ ನಟ ಶಿವಾಜಿ ಗಣೇಶನ್ ಅವರಿಗೆ ಬರೆದಿದ್ದಂತೆ. ಆದರೆ, ಅವರು ಒಪ್ಪಿಕೊಳ್ಳಲಿಲ್ಲವಂತೆ. ಕ್ರಮೇಣ ಚಿ.ಉದಯಶಂಕರ್ ಮೂಲಕ ದೊರೈ-ಭಗವಾನ್‌ಗೆ ಕಥೆ ಕೇಳಿ, ಅದನ್ನು ರಾಜಕುಮಾರ್ ಅವರಿಗೆ ಹೇಳಿದ್ದಾರೆ. ಆದರೆ, ಅಣ್ಣಾವ್ರ, ಶಿವಾಜಿ ಗಣೇಶನ್ ಅಂಥವರೇ ಹಿಂಜರಿದಿರುವಾಗ ನಾವು ಮಾಡುವುದು ಸೂಕ್ತವೇ ಎಂದಿದ್ದರಂತೆ. ಆದರೆ, ದೊರೈ-ಭಗವಾನ್, ವರದಪ್ಪ ಮೂಲಕ ಅಣ್ಣಾವ್ರನ್ನು ಒಪ್ಪಿಸಿ ಚಿತ್ರ ಆರಂಭಿಸಿದ್ದರಂತೆ. ಈ ಚಿತ್ರದ ಒಂದು ದೃಶ್ಯದಲ್ಲಿ ಜಯಂತಿ, ಅಣ್ಣಾವ್ರಿಗೆ ತಮ್ಮ ಮದುವೆ ವಿಚಾರ ಹೇಳಲು ಬರುತ್ತಾರೆ. ಆಗ ಅಣ್ಣಾವ್ರ ನಟನೆ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವಂತೆ ಮೂಡಿಬಂದಿದೆ. ಇನ್ನು ‘ಆಡಿಸಿ ನೋಡು’ ರೆಕಾರ್ಡಿಂಗ್ ಆಗುವ ಮುನ್ನವೇ ಅಣ್ಣಾವ್ರ ಪೂರ್ತಿ ಹಾಡನ್ನು ಕಂಠಪಾಠ ಮಾಡಿ ಚಿತ್ರೀಕರಣ ಮಾಡಿದ್ದರಂತೆ. ಜತೆಗೆ ಆ ಸಾಂಗ್‌ನಲ್ಲಿ ಗೊಂಬೆಯನ್ನು ಚೆನ್ನೈನಿಂದ ತರಿಸಲಾಗಿತ್ತು. ಈ ಚಿತ್ರ ಬಿಡುಗಡೆಯಾದ ಬಳಿಕ ಆ ಗೊಂಬೆಗೂ ಬೇಡಿಕೆ ಬಂದಿತ್ತು.
ಚಿಕ್ಕಪ್ಪ- ನಿರ್ಮಾಪಕರೊಬ್ಬರು ಸ್ಫೂರ್ತಿ: ಡಾ.ರಾಜಕುಮಾರ್ ಅವರಿಗೆ ‘ಕಸ್ತೂರಿ ನಿವಾಸ’ ಮಾಡಲು ಅವರ ಚಿಕ್ಕಪ್ಪ ಒಂದು ರೀತಿಯಲ್ಲಿ ಸ್ಫೂರ್ತಿ. ಮುತ್ತುರಾಜ್ ಎಂದರೆ ಚಿಕ್ಕಪ್ಪಗೆ ತುಂಬಾ ಪ್ರೀತಿ. ಅವರು ಆರ್ಥಿಕವಾಗಿ ಸ್ಥಿತಿವಂತರು, ಉದಾರ ದಾನಿಯಾಗಿದ್ದರಂತೆ. ಹಾಗಾಗಿ, ಈ ಚಿತ್ರದ ಮೂಲಕ ಡಾ.ರಾಜ್, ಅವರ ಚಿಕ್ಕಪನನ್ನ ಮತ್ತೊಮ್ಮೆ ನೋಡುವಂತಾಯಿತಂತೆ. ಜತೆಗೆ ಟಿ.ಪಿ.ವೇಣುಗೋಪಾಲ್ ಎಂಬ ನಿರ್ಮಾಪಕರು ಸಹ ಈ ಕಥೆಗೆ ಸ್ಫೂರ್ತಿಯಾಗಿದ್ದರಂತೆ.
ಸಂಜೀವ್ ಕುಮಾರ್ ಮೆಚ್ಚಿದ್ದ ಚಿತ್ರ: ‘ಕಸ್ತೂರಿ ನಿವಾಸ’ ಚಿತ್ರವು ‘ಶಾಂದಾರ್’ ಹೆಸರಿನಲ್ಲಿ ಹಿಂದಿಗೆ ರಿಮೇಕ್ ಆಗಿತ್ತು. ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಜೀವ್ ಕುಮಾರ್ ಮುಖ್ಯಭೂಮಿಕೆಯಲ್ಲಿದ್ದರು. ತುಂಬಾ ಜನ ಅವರಿಗೆ ‘ಕಸ್ತೂರಿ ನಿವಾಸ’ ನೋಡುವಂತೆ ಹೇಳಿದ್ದರೂ, ಅವರು ನೋಡದೇ ರಾಜಕುಮಾರ್‌ಗಿಂತ ಚೆನ್ನಾಗಿ ನಟಿಸಿ ತೋರಿಸುವೆ ಎಂದಿದ್ದರಂತೆ. ಮುಂದೊಂದು ದಿನ ಸಂಜೀವ ಕುಮಾರ್ ‘ಕಸ್ತೂರಿ ನಿವಾಸ’ ಸಿನಿಮಾ ನೋಡಿ, ಅಣ್ಣಾವ್ರ ಆ್ಯಕ್ಟಿಂಗ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ. ಆ ಬಳಿಕ ಮದ್ರಾಸ್‌ನಲ್ಲಿ ಇಬ್ಬರು ಭೇಟಿಯಾಗಿದ್ದರು.
ಕಲರಿಂಗ್ ಆಗಿ ಬಿಡುಗಡೆ: ಕನ್ನಡದಲ್ಲಿ ಮರುಬಿಡುಗಡೆಯಾದ ಅತಿಹೆಚ್ಚು ಚಿತ್ರಗಳು ಅಂದರೆ ಅವು ಡಾ. ರಾಜಕುಮಾರ್ ಅವರ ಸಿನಿಮಾಗಳು. ಆ ಸಾಲಿಗೆ ‘ಕಸ್ತೂರಿ ನಿವಾಸ’ ಕೂಡ ಸೇರುತ್ತದೆ. ಮೊದಲ ಬಾರಿ ಕಪ್ಪು-ಬಿಳುಪು ಅವತರಣಿಕೆಯಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವು 43 ವರ್ಷಗಳ ಬಳಿಕ ಅರ್ಥಾತ್ 2014ರಲ್ಲಿ ವರ್ಣರೂಪ ನೀಡಿ ರಿ-ರಿಲೀಸ್ ಮಾಡಲಾಗಿತ್ತು. ಮರುಬಿಡುಗಡೆಯಲ್ಲೂ ಹಲವೆಡೆ ಹೌಸ್‌ುಲ್ ಪ್ರದರ್ಶನ ಕಂಡಿದ್ದ ‘ಕಸ್ತೂರಿ ನಿವಾಸ’ ಭರ್ಜರಿ ಕಲೆಕ್ಷನ್ ಮಾಡಿಕೊಂಡಿತ್ತು.