ಬೆಂಗಳೂರು: ಈ ವರ್ಷದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಗಮನ ಸೆಳೆಯುವುದರ ಜತೆಗೆ, ಪ್ರಶಸ್ತಿ ಪಡೆದ ಚಿತ್ರವೆಂದರೆ ಅದು 'ದೊಡ್ಡಹಟ್ಟಿ ಬೋರೇಗೌಡ'. ಮುಂದಿನ ಫೆಬ್ರವರಿಯಲ್ಲಿ ಆ ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಅದಕ್ಕೂ ಮುನ್ನ ಇತ್ತೀಚೆಗೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಇದನ್ನೂ ಓದಿ: ‘ಸಾವಿರುಪಾಯಿಗೆ ಸ್ವರ್ಗ’ ತೋರಿಸ್ತಾರಂತೆ ಅಲ್ಲು ರಘು …
ಈ ಹಿಂದೆ 'ತರ್ಲೆ ವಿಲೇಜ್, ಪರಸಂಗ ಚಿತ್ರಗಳನ್ನು ನಿರ್ದೇಶಿಸಿದ್ದ ಕೆ.ಎಂ. ರಘು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಅವರು, 'ಹಳ್ಳಿಯಲ್ಲಿ ಬಡವರಿಗೆ ಸರ್ಕಾರದಿಂದ ನೀಡುವ ಆಶ್ರಯ ಯೋಜನೆ ಮನೆಯನ್ನು ವ್ಯಕ್ತಿಯೊಬ್ಬ ಪಡೆದುಕೊಳ್ಳಲು ಯಾವರೀತಿ ಕಷ್ಟಪಡುತ್ತಾನೆ ಎಂಬುದನ್ನು ನಮ್ಮ ಚಿತ್ರದಲ್ಲಿ ತೋರಿಸಿದ್ದೇವೆ. ನಮ್ಮ ಚಿತ್ರಕ್ಕೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಕೂಡ ದೊರಕಿದೆ. ಇದು ಕಲಾತ್ಮಕ ಚಿತ್ರ ಅಲ್ಲ. ಕಮರ್ಷಿಯಲ್ ಚಿತ್ರ. ಈ ಚಿತ್ರದಲ್ಲಿ ಗ್ರಾಮೀಣ ಪ್ರತಿಭೆಗಳೇ ಅಭಿನಯಿಸಿರುವುದು ವಿಶೇಷ. ಮೂರು ತಿಂಗಳ ಕಾಲ ಎಲ್ಲರಿಗೂ ತರಭೇತಿ ನೀಡಲಾಗಿದೆ' ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.
ಈ ಚಿತ್ರದ ಬೋರೇಗೌಡನ ಪಾತ್ರ ಮಾಡಿರುವ ಶಿವಣ್ಣ ಬೀರಹುಂಡಿ, 'ನಾನು ಮೈಸೂರಿನ ಬಳಿಯ ಬೀರಹುಂಡಿ ಎಂಬ ಹಳ್ಳಿಯವನು. ಗ್ರಾಮ ಪಂಚಾಯತಿ ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದೇನೆ. ರಂಗಭೂಮಿಯಲ್ಲಿ ಅನುಭವವಿದೆ. ಹಿರಿತೆರೆಯಲ್ಲಿ ಮೊದಲ ಚಿತ್ರ' ಎಂದು ತಮ್ಮ ಬಗ್ಗೆ ಹೇಳಿಕೊಳ್ಳುತ್ತಾರೆ.
ರಾಜರಾಜೇಶ್ವರಿ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ದೊಡ್ಡಹಟ್ಟಿ ಬೋರೇಗೌಡ' ಚಿತ್ರದಲ್ಲಿ ಗೀತಾ, ಲಾವಣ್ಯ, ಕಲಾರತಿ ಮಹದೇವ್, ಕಾತ್ಯಾಯಿನಿ, ಯೋಗೇಶ್ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಹರ್ಷವರ್ಧನ್ ರಾಜ್ ಸಂಗೀತ ಸಂಯೋಜಿಸಿದ್ದು, ಶಶಿಕುಮಾರ್ ಬಿ ಸಿ ಹಾಗೂ ಲೋಕೇಶ್ ಕೆ.ಎಂ ಈ ಚಿತ್ರವನ್ನು ನಿರ್ಮಿಸಿದ್ದಾರೆ.