Ramayana Collection: ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ರಾಮಾಯಣ ಭಾಗ 1 ಬಿಡುಗಡೆಯ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದರೂ ಅಭಿಮಾನಿಗಳು ಮತ್ತು ಚಿತ್ರತಂಡ ನಿರೀಕ್ಷಿಸಿದ್ದಂತಹ ಭರ್ಜರಿ ಕಿಕ್ಸ್ಟಾರ್ಟ್ ಸಿಗಲಿಲ್ಲ. ಇದೀಗ ಮಂದಗತಿಯಲ್ಲೇ ವಾರಾಂತ್ಯದ ರಜೆಗಳ ಲಾಭವನ್ನು ಪಡೆಯುತ್ತಿರುವ ಸಿನಿಮಾ, ಶನಿವಾರ ಒಂದೇ ದಿನ ದಾಖಲೆಯ ಗಳಿಕೆ ಕಂಡಿದೆ.
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರಕ್ಕೆ ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ಹರಿದುಬರುತ್ತಿದ್ದು, ಅವುಗಳಲ್ಲಿ ಹೆಚ್ಚಾಗಿ ಪಾಸಿಟಿವ್ ರೆಸ್ಪಾನ್ಸ್ಗಳು ತುಂಬಿವೆ. ಬಾಕ್ಸ್ ಆಫೀಸ್ನಲ್ಲಿ ಎರಡನೇ ದಿನ ಕೊಂಚ ಸ್ಲೋ ಆಗಿದ್ದ ಈ ಪೌರಾಣಿಕ ದೃಶ್ಯ ಕಾವ್ಯ, ಮೂರನೇ ದಿನವಾದ ಶನಿವಾರ (ನವೆಂಬರ್ 7) ದೇಶಿಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ದೊಡ್ಡ ಜಿಗಿತ ಕಾಣುವ ಮೂಲಕ ಭಾರಿ ಕಲೆಕ್ಷನ್ ಅನ್ನೇ ದಾಖಲಿಸಿದೆ.
ಮೊದಲ ದಿನದ ಗಳಿಕೆ ನಿರೀಕ್ಷಿತ ಮಟ್ಟ ತಲುಪದೆ ಹೋದರೂ ಈಗ ವಾರಾಂತ್ಯದ ರಜೆಗಳು ಮತ್ತು ದೀಪಾವಳಿ ಹಬ್ಬದ ಸಾಲು ಸಾಲು ರಜೆಗಳು ಚಿತ್ರಕ್ಕೆ ಹೆಚ್ಚಿನ ಬೂಸ್ಟ್ ನೀಡುವ ಲಕ್ಷಣಗಳು ಕಂಡುಬಂದಿವೆ. ಇದಕ್ಕೆ ಶನಿವಾರ ಒಂದೇ ದಿನದ ಕಲೆಕ್ಷನ್ ಆ ಭರವಸೆಯನ್ನು ಕೊಟ್ಟಿದ್ದು, ಮೂರನೇ ದಿನದ ಅಂತ್ಯಕ್ಕೆ ಚಿತ್ರವು 375 ಕೋಟಿ ರೂ. ಗಳಿಸಿದೆ. 'ಸ್ಯಾಕ್ನಿಲ್ಕ್' (Sacnilk) ವರದಿ ಅನುಸಾರ, ಚಿತ್ರವು ಶನಿವಾರ ಒಂದೇ ದಿನ ಭಾರತದಲ್ಲಿ 69.80 ಕೋಟಿ ರೂ. ಗಳಿಕೆ ಕಂಡಿದೆ.
ಈ ಕಲೆಕ್ಷನ್ನೊಂದಿಗೆ ಭಾರತದಲ್ಲಿ ಚಿತ್ರದ 3 ದಿನಗಳ ಒಟ್ಟು ಗಳಿಕೆ 182.70 ಕೋಟಿಗೆ ತಲುಪಿದ್ದರೆ, ಜಾಗತಿಕವಾಗಿ 375.50 ಕೋಟಿ ಬಾಚಿಕೊಂಡು ಭರ್ಜರಿ ಯಶಸ್ಸಿನತ್ತ ದಾಪುಗಾಲಿಟ್ಟಿದೆ. ಮೊದಲ ದಿನ 64.85 ಕೋಟಿ ರೂ. ಗಳಿಸಿ, ಭರ್ಜರಿ ಶುಭಾರಂಭ ಕಂಡಿದ್ದ ಚಿತ್ರ, ಎರಡನೇ ದಿನ ಶೇ.25.9ರಷ್ಟು ಇಳಿಕೆ ಕಂಡು 48.05 ಕೋಟಿ ರೂ. ಗಳಿಸಿತು. ಆದರೆ, ಅದೇ ಶನಿವಾರ ಚಿತ್ರಮಂದಿರಗಳು ಸಿನಿ ಪ್ರೇಕ್ಷಕರಿಂದ ತುಂಬಿದ್ದು, ಹೆಚ್ಚುವರಿ ಕಲೆಕ್ಷನ್ಗೆ ಸಾಕ್ಷಿಯಾಗಿದೆ.
ಭಾರತದ ಒಟ್ಟು ಗಳಿಕೆ 218.25 ಕೋಟಿ ರೂ. ಆಗಿದ್ದು, ವಿದೇಶಿ ಮಾರುಕಟ್ಟೆಯಲ್ಲಿ 3ನೇ ದಿನ 60 ಕೋಟಿ ರೂ. ಕಲೆಕ್ಷನ್ ಆಗಿದೆ. ಈ ಮೂಲಕ ವಿದೇಶದಲ್ಲೂ ಚಿತ್ರದ ಮೂರು ದಿನಗಳ ಒಟ್ಟು ಗಳಿಕೆ 157.25 ಕೋಟಿ ರೂ.ಗೆ ಏರಿಕೆಯಾಗಿದೆ. ಇನ್ನು, ಶನಿವಾರ ದೇಶಾದ್ಯಂತ 23,696 ಪ್ರದರ್ಶನಗಳು ಕಂಡಿದ್ದು, ಸುಮಾರು 26.24 ಲಕ್ಷ ಪ್ರೇಕ್ಷಕರು ಸಿನಿಮಾ ನೋಡಿದ್ದಾರೆ. ಈ ಮೂಲಕ 3 ದಿನಗಳಲ್ಲಿ ಒಟ್ಟು 69.88 ಲಕ್ಷಕ್ಕೂ ಹೆಚ್ಚು ಜನರು ಚಿತ್ರಮಂದಿರಕ್ಕೆ ಭೇಟಿ ನೀಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
1. ಹಿಂದಿ: 53 ಕೋಟಿ ರೂ.
2. ಕನ್ನಡ: 6.30 ಕೋಟಿ ರೂ.
3. ತೆಲುಗು: 6 ಕೋಟಿ ರೂ.
4. ತಮಿಳು: 2.50 ಕೋಟಿ ರೂ.
5. ಮಲಯಾಳಂ: 2 ಕೋಟಿ ರೂ.
ರಾಮಾಯಣ ಚಿತ್ರದ ಎರಡೂ ಭಾಗಗಳನ್ನು ಸೇರಿಸಿ ಸುಮಾರು 4,000 ಕೋಟಿ ಬಜೆಟ್ನಲ್ಲಿ ನಿರ್ಮಿಸಲಾಗಿದೆ ಎಂದು ಸಿನಿ ಮೂಲಗಳು ತಿಳಿಸಿವೆ. ಹೀಗಾಗಿ, ಮೊದಲ ಭಾಗದ ಅಂದಾಜು ಬಜೆಟ್ 2,000 ಕೋಟಿ ರೂ. ಎಂದು ಪರಿಗಣಿಸಲಾಗಿದೆ. ಇಷ್ಟು ಬೃಹತ್ ಬಜೆಟ್ನಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ಮೂರನೇ ದಿನದ ಗಳಿಕೆ ಕೊಂಚ ಸಮಾಧಾನಕರ ನೀಡಿದೆಯಾದರೂ, ಚಿತ್ರದ ಮುಂದಿನ ಭವಿಷ್ಯ ವಾರಾಂತ್ಯ ಹಾಗೂ ಹಬ್ಬದ ಗಳಿಕೆಯ ಮೇಲೆ ಅವಲಂಬಿತವಾಗಲಿದೆ. ಬುಧವಾರ ಹೊತ್ತಿಗೆ ಚಿತ್ರದ ಒಟ್ಟು ಗಳಿಕೆ ಎಷ್ಟಾಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).