ಬೆಂಗಳೂರು: 6-5=2 ಮೂಲಕ ಚಿತ್ರರಂಗದಲ್ಲಿ ಬೇರೆಯದ್ದೇ ರೀತಿಯ ಸದ್ದು ಮಾಡಿದ ಅಶೋಕ್ ಈಗ ‘ದಿಯಾ’ ಎಂಬ ಚಿತ್ರದ ಮೂಲಕ ವಾಪಸಾಗಿದ್ದು, ಅದರಲ್ಲಿ ಯೂರೋಪಿಯನ್ ಸಿನಿಮಾಗಳ ಮೇಕಿಂಗ್ ಶೈಲಿ ಅಳವಡಿಸಿಕೊಂಡಿದ್ದಾರಂತೆ.
‘ದಿಯಾ ಒಂದು ಸಾಧಾರಣ ಹುಡುಗಿಯ ಕಥೆ. ಚಿಕ್ಕ ವಯಸ್ಸಿನಲ್ಲಿ ಯಾವುದೋ ಕಾರಣಕ್ಕೆ ಡಿಪ್ರೆಷನ್ಗೆ ಒಳಗಾದ ಹುಡುಗಿ ಮುಂದೆ ಕಾಲೇಜಿಗೆ ಸೇರಿಕೊಂಡಾಗ ಪ್ರೀತಿಯಾಗುತ್ತದೆ. ಆಗ ಆಕೆ ಅದನ್ನೆಲ್ಲ ಹೇಗೆ ನಿಭಾಯಿಸುತ್ತಾಳೆ ಎನ್ನುವುದೇ ಈ ಸಿನಿಮಾ. ಕೇಳಲು ಬಹಳ ಸಿಂಪಲ್ ಎನಿಸುವ ಈ ಕಥೆಯಲ್ಲಿ ವಿಶೇಷ ಎಂದರೆ ನಿರ್ದೇಶಕರು ಯೂರೋಪಿಯನ್ ಸಿನಿಮಾಗಳ ಮೇಕಿಂಗ್ ಸ್ಟೈಲ್ ಅಳವಡಿಸಿಕೊಂಡಿದ್ದಾರೆ. ನನಗೆ ಈ ಪಾತ್ರ ಸಿಕ್ಕಿದ್ದು ಬಹಳ ಖುಷಿಯ ವಿಚಾರ’ ಎನ್ನುತ್ತಾರೆ ನಾಯಕಿ ಖುಷಿ.
‘ನಿರ್ದೇಶಕರು ಆಡಿಷನ್ಗೆ ಕರೆದಾಗ ಸೀನ್ ಕೊಟ್ಟು, ನಿಮ್ಮ ಹಳೆಯ ನಟನೆ ಮರೆತು ಹೊಸದಾಗಿ ನಟಿಸಬೇಕು ಎಂದು ಹೇಳಿದ್ದರು. ನನಗೆ ಇದು ಚಾಲೆಂಜಿಂಗ್ ಎನಿಸಿತು. ದಿಯಾ ಸಂಕೋಚವುಳ್ಳ ಹುಡುಗಿ, ಯಾರ ಜತೆನೂ ಅಷ್ಟು ಬೆರೆಯುವುದಿಲ್ಲ, ಅವಳದ್ದೇ ಆದಂತಹ ಪ್ರಪಂಚವನ್ನು ಸೃಷ್ಟಿ ಮಾಡಿಕೊಂಡಿರುತ್ತಾಳೆ. ಈ ರೀತಿಯ ಪಾತ್ರವನ್ನು ನಿರ್ವಹಿಸಿದ್ದು ನನಗೆ ಬಹಳ ಸಂತಸದ ವಿಚಾರ’ ಎಂದು ಹೇಳುತ್ತಾರವರು. ಫೆ. 7ರಂದು ರಿಲೀಸ್ ಆಗುತ್ತಿರುವ ಈ ಸಿನಿಮಾದಲ್ಲಿ ದೀಕ್ಷಿತ್ ಶೆಟ್ಟಿ ಮತ್ತು ಪೃಥ್ವಿ ಅಂಬರ್ ನಾಯಕರಾಗಿದ್ದಾರೆ. ನಾಯಕಿ ಖುಷಿ ಈ ಹಿಂದೆ ‘ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ’ ಸಿನಿಮಾದಲ್ಲಿ ನಟಿಸಿದ್ದರು. ಜತೆಗೆ ರಂಗಭೂಮಿಯಲ್ಲಿಯೂ ಅವರು ಕೆಲಸ ಮಾಡಿದ್ದಾರೆ.
ದಿಯಾದಲ್ಲಿ ನಾನು ಟೈಟಲ್ ರೋಲ್ನಲ್ಲಿ ಕಾಣಿಸಿಕೊಂಡಿದ್ದು ಹೊಸ ಅನುಭವ ನೀಡಿದೆ. ಚಿತ್ರದಲ್ಲಿ ವಿಶೇಷ ಕಥೆ ಇಲ್ಲ. ಆದರೆ ಮೇಕಿಂಗ್ ಶೈಲಿ, ವಿಭಿನ್ನ ಚಿತ್ರಕಥೆ ಹೊಂದಿದೆ. | ಖುಷಿ ನಟಿ