6-5=2 ಎಂಬ ವಿಚಿತ್ರ ಟೈಟಲ್ ಇಟ್ಟು ಪ್ರೇಕ್ಷಕರನ್ನು ಹೆದರಿಸಿದ್ದ ನಿರ್ದೇಶಕರು ಈ ಬಾರಿ ‘ದಿಯಾ’ ಸಾಮಾನ್ಯ ಹುಡುಗಿಯ ಬದುಕಿನ ಕಥೆಯನ್ನು ಭಾವನಾತ್ಮಕವಾಗಿ ಮತ್ತು ಕೊಂಚ ಥ್ರಿಲ್ಲಿಂಗ್ ಆಗಿ ಹೇಳಿದ್ದಾರೆ. ಹದಿ ಹರೆಯದಲ್ಲಿ ಪ್ರೀತಿ ಪ್ರೇಮ ಎಲ್ಲವೂ ಕಾಮನ್ ಎಂಬಂತೆ ಸಿನಿಮಾದ ನಾಯಕಿ ದಿಯಾಳಿಗೆ ಲವ್ ಆಗುತ್ತದೆ, ಆದರೆ ಆಕೆಗೆ ಆತ ಸಿಗುವುದಿಲ್ಲ, ಅದ್ಯಾಕೆ ಎಂಬುದೇ ಸಸ್ಪೆನ್ಸ್ .
ನಿರ್ದೇಶಕರು ಹೆಣೆದಿರುವ ದೃಶ್ಯಗಳನ್ನು ಪ್ರೇಕ್ಷಕರ ಮನಸ್ಸಿಗೆ ನಾಟುವಂತೆ ಮಾಡುವುದು ಹಿನ್ನೆಲೆ ಸಂಗೀತ. ಇದನ್ನು ಮಾಡಿರುವ ಅಜನೀಶ್ ಲೋಕನಾಥ್ ನಿಜಕ್ಕೂ ಅಭಿನಂದನಾರ್ಹರು. ಸಿನಿಮಾಟೋಗ್ರಫಿ ಕೂಡ ಅದ್ಭುತವಾಗಿ ಮೂಡಿ ಬಂದಿದೆ.
ನಾಯಕಿ ಖುಷಿ ಪ್ರತಿಯೊಂದು ಫ್ರೇಮ್ನ್ನು ತಮ್ಮ ಮುಗ್ಧ ನಟನೆಯ ಮೂಲಕ ಅದ್ಭುತಗೊಳಿಸಿದ್ದಾರೆ. ಮಾನಸಿಕವಾಗಿ ನೊಂದ ಹುಡುಗಿಯ ಪಾತ್ರಕ್ಕೂ ಜೀವ ತುಂಬಿದ್ದಾರೆ. ಕ್ಯೂಟ್ ಆಗಿ ಕಾಣುವ ದೀಕ್ಷೀತ್ ಶೆಟ್ಟಿ ಇಷ್ಟವಾದರೆ, ಪೃಥ್ವಿ ಅಂಬರ್ ತಮ್ಮ ಲವಲವಿಕೆಯ ನಟನೆಯಿಂದ ಭರವಸೆಯ ನಟನಾಗುವ ಎಲ್ಲ ಲಕ್ಷಣ ತೋರಿದ್ದಾರೆ. ತಾಯಿ ಮಗನ ನಡುವಿನ ದೃಶ್ಯದಲ್ಲಿ ಪೃಥ್ವಿ ಮತ್ತು ಪವಿತ್ರಾ ಲೊಕೇಶ್ ಇಬ್ಬರೂ ನೋಡುಗರಿಗೆ ಹೆಚ್ಚು ಇಷ್ಟವಾಗುತ್ತಾರೆ.
ಸಂಭಾಷಣೆಗಳು ಸಿಂಪಲ್ ಆಗಿದ್ದರೂ, ನೋಡುಗನಿಗೆ ಸಿನಿಮಾವನ್ನು ಕನೆಕ್ಟ್ ಆಗುವಂತೆ ಬರೆದಿದ್ದಾರೆ ನಿರ್ದೇಶಕರು. ಸಿನಿಮಾದಲ್ಲಿ ಆಗಾಗ ಪ್ರಸ್ತಾಪವಾಗುವ ‘ಲೈಫ್ ಈಸ್ ಫುಲ್ ಆಫ್ ಸರ್ಪ್ರೖೆಸಸ್ ಆಂಡ್ ಮಿರಾಕಲ್ಸ್’ ಎಂಬ ಪದದಂತೆ ಚಿತ್ರಕಥೆ ಕೂಡಾ ಪವಾಡ ಮತ್ತು ಆಶ್ಚರ್ಯಗಳ ಗುಚ್ಛವೇ ಆಗಿದೆ.
ಪ್ರೇಕ್ಷಕ ಬೆಚ್ಚಿ ಬೆರಗಾಗುವಂತಹ ಕ್ಲೈಮ್ಯಾಕ್ಸ್ ನೀಡಿದ್ದಾರೆ. ಇಡೀ ಸಿನಿಮಾ ಒಂದು ತೂಕವಾದರೆ ಕ್ಲೈಮ್ಯಾಕ್ಸೇ ಒಂದು ತೂಕ. ಹಾಗಾಗಿ ಅದನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು. ಈ ವೀಕೆಂಡ್ಗೆ ದಿಯಾ ಒಂದು ಅದ್ಭುತ ಸಂಗಾತಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.
| ಹ.ಬ. ರಾಜ್ ಬೆಂಗಳೂರು