ಸಿನಿವಾಣಿ

ಜಿ.ವಿ. ಪ್ರಕಾಶ್​ ಕುಮಾರ್​, ಸೈಂಧವಿ ವಿಚ್ಛೇದನಕ್ಕೆ ದಿವ್ಯಭಾರತಿ ಕಾರಣಾನಾ? ನಟಿ ಹೇಳಿದ್ದೇನು?

ತಮಿಳು ನಟ, ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್​ ಕುಮಾರ್​ ಮತ್ತು ಗಾಯಕಿ ಸೈಂಧವಿ 11 ವರ್ಷಗಳ ದಾಂಪತ್ಯ ಜೀವನಕ್ಕೆ 2024ರಲ್ಲಿ ಇತಿಶ್ರೀ ಹಾಡಿದ್ದರು. 2021ರ "ಬ್ಯಾಚುಲರ್​' ಚಿತ್ರದಲ್ಲಿ ಪ್ರಕಾಶ್​ಗೆ ನಾಯಕಿಯಾಗಿದ್ದ ನಟಿ ದಿವ್ಯಭಾರತಿಯೇ ಅದಕ್ಕೆ ಕಾರಣ ಎನ್ನಲಾಗಿತ್ತು.

ಹಾಗೇ ಇದೇ ಮಾ. 7ರಂದು ರಿಲೀಸ್​ ಆಗಲಿರುವ "ಕಿಂಗ್​ಸ್ಟನ್​' ಚಿತ್ರದಲ್ಲೂ ಈ ಜೋಡಿ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದೆ. ಹೀಗಾಗಿ ಪ್ರಕಾಶ್​ ಮತ್ತು ಸೈಂಧವಿ ವಿಚ್ಛೇದನ ಪ್ರಕರಣ ಜಾಲತಾಣದಲ್ಲಿ ಇದೀಗ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.

( Photos : Instagram )

ಈ ಬಗ್ಗೆ ಮೌನ ಮುರಿದಿರುವ ದಿವ್ಯಭಾರತಿ, "ವಿಚ್ಛೇದನದ ಸಮಯದಲ್ಲಿ ನಾನು, ಪ್ರಕಾಶ್​ ಒಟ್ಟಿಗೆ ನಟಿಸುತ್ತಿದ್ದ ಕಾರಣ ನನ್ನನ್ನು ತುಂಬ ಕೆಟ್ಟದಾಗಿ ಟ್ರೋಲ್​ ಮಾಡಿದರು. ಆ ಬಳಿಕವೂ ಪ್ರಕಾಶ್​, ಸೈಂಧವಿ ಒಟ್ಟಿಗೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದನ್ನು ನೋಡಿ ನನಗಂತೂ ಖುಷಿಯಾಯಿತು. ಆದರೆ, ಆಗಲೂ, ನಾನೇ ಟ್ರೋಲ್​ ಆದೆ. ಅವರ ಡಿವೋರ್ಸ್​ಗೆ ನಾನೇ ಕಾರಣ ಅಂತ ಕೆಟ್ಟದಾಗಿ ಮೆಸೇಜ್​ಗಳು ಬರುತ್ತಿದ್ದವು. ಅಂತಹ ಕೆಲ ಮೆಸೇಜ್​ಗಳನ್ನು ಪ್ರಕಾಶ್​ಗೂ ತೋರಿಸಿದ್ದೆ. ಆದರೆ, ಅವರು ಅವುಗಳನ್ನು ಕಡೆಗಣಿಸಿ, ಕೆಲಸದ ಬಗ್ಗೆ ಗಮನ ಹರಿಸುವಂತೆ ಹೇಳಿದರು' ಎಂದು ಸ್ಪಷ್ಟನೆ ನೀಡಿದ್ದಾರೆ. "ಕಿಂಗ್​ಸ್ಟನ್​' ಜತೆ ದಿವ್ಯಭಾರತಿ ಎರಡು ಚಿತ್ರಗಳು ಹಾಗೂ ಒಂದು ವೆಬ್​ಸರಣಿಯಲ್ಲಿ ಬಿಜಿಯಾಗಿದ್ದಾರೆ.