ಸಿನಿವಾಣಿ

ನಿರ್ದೇಶಕರ ಅನುಭವವೇ ದಿಲ್ ಖುಷ್; 90% ಮನರಂಜನೆ, 10% ಸೆಂಟಿಮೆಂಟ್

Webdesk - Ravikanth

ಬೆಂಗಳೂರು: ನೋಡಿದ್ದು, ಕೇಳಿದ್ದು, ಓದಿದ್ದು ... ಇದನ್ನಿಟ್ಟುಕೊಂಡೇ ಚಿತ್ರ ಮಾಡುವ ಹಲವರಿದ್ದಾರೆ. ಆ ಸಾಲಿಗೆ ಪ್ರಮೋದ್ ಜಯ ಸಹ ಸೇರಿದ್ದಾರೆ. ‘ದಿಲ್ ಖುಷ್’ ಎಂಬ ಚಿತ್ರವನ್ನು ಅವರು ಶುರು ಮಾಡಿದ್ದು, ತಮ್ಮ ಜೀವನದಲ್ಲಾದ ಕೆಲವು ಅನುಭವಗಳು ಮತ್ತು ಘಟನೆಗಳನ್ನು ಆಧರಿಸಿ ಕಥೆ ಬರೆದಿದ್ದಾರಂತೆ. ಶೇ. 90ರಷ್ಟು ಮನರಂಜನೆ ಇದ್ದರೆ, ಹತ್ತು ಭಾಗದಷ್ಟು ಸೆಂಟಿಮೆಂಟ್ ಇರುತ್ತದಂತೆ.

ಅಂದಹಾಗೆ, ಈ ಚಿತ್ರದ ಮುಹೂರ್ತ ಇತ್ತೀಚೆಗೊಂದು ದಿನ ಬ್ರಾಹ್ಮಿ ಮುಹೂರ್ತದಲ್ಲಿ, ಮೋದಿ ಆಸ್ಪತ್ರೆ ಬಳಿ ಇರುವ ಗಣಪತಿ ದೇವಸ್ಥಾನದಲ್ಲಿ ಸಾಂಗವಾಗಿ ನೆರವೇರಿದೆ. ಈ ಚಿತ್ರವನ್ನು ಜಯಪ್ರಭ ಫಿಲಂಸ್​ನಡಿ ಜಯಲಕ್ಷ್ಮೀ ಪ್ರವೀಣ್ ಹಾಗೂ ಪ್ರಭಾ ಶೇಖರ್ ಜತೆಯಾಗಿ ನಿರ್ವಿುಸುತ್ತಿದ್ದಾರೆ. ಪ್ರಮೋದ್, ಸಿಂಪಲ್ ಸುನಿ ಅವರಿಂದ ಕೆಲಸ ಕಲಿತವರಂತೆ. ‘ಬಜಾರ್’ಗೆ ಒಂದು ಹಾಡನ್ನೂ ಬರೆದಿದ್ದಾರೆ. ಈಗ ಮೊದಲ ಚಿತ್ರ ನಿರ್ದೇಶಿಸುವುದಕ್ಕೆ ತಯಾರಾಗಿದ್ದಾರೆ. ‘ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ. ಜೂನ್ 15ರಿಂದ ಶನಿವಾರ ಸಂತೆಯಲ್ಲಿ ಚಿತ್ರೀಕರಣ ನಡೆಯಲಿದೆ. ಕ್ಲೈಮ್ಯಾಕ್ಸ್ ನೋಡಿದ ಪ್ರೇಕ್ಷಕನ ಕಣ್ಣಂಚಿನಲ್ಲಿ ನೀರು ಬರುವುದು ಖಂಡಿತಾ’ ಎನ್ನುತ್ತಾರೆ ಪ್ರಮೋದ್.

ನಾಟಕ, ಧಾರಾವಾಹಿ ಮತ್ತು ಕಿರುಚಿತ್ರಗಳಲ್ಲಿ ನಟಿಸಿರುವ ರಂಜಿತ್ ಈ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ಸದಾ ಲವಲವಿಕೆಯಿಂದ ಇರುವ ಹುಡುಗನ ಪಾತ್ರ ನೀಡಲಾಗಿದೆಯಂತೆ. ಅವರಿಗೆ ನಾಯಕಿಯಾಗಿ ಸ್ಪಂದನಾ ಸೋಮಣ್ಣ ನಟಿಸುತ್ತಿದ್ದು, ‘ಈಗಿನ ಕಾಲದ ಹುಡುಗಿಯರು ಹೇಗಿರುತ್ತಾರೋ, ಅದೇ ರೀತಿ ಇರುವ ಹುಡುಗಿಯ ಪಾತ್ರ ನನ್ನದು’ ಎನ್ನುತ್ತಾರೆ. ಧರ್ಮಣ್ಣ, ರಂಗಾಯಣ ರಘು, ರಘು ರಾಮನಕೊಪ್ಪ, ಸೂರ್ಯಪ್ರವೀಣ್ ಮುಂತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಪ್ರಸಾದ್ ಶೆಟ್ಟಿ ಸಂಗೀತ ಸಂಯೋಜಿಸುತ್ತಿದ್ದಾರೆ.