ಸಿನಿವಾಣಿ

ತ್ರಿನಾದ್‌ಗೆ ತಿರುಗುಬಾಣ: ನಟಿಯ ‘ಸೈಜ್’ ಬಗ್ಗೆ ಮಾತನಾಡಿದ ನಿರ್ದೇಶಕನಿಗೆ ಕ್ಲಾಸ್

ಸಿನಿಮಾ ಕಾರ್ಯಕ್ರಮಗಳಲ್ಲಿ ನಟ-ನಟಿಯರ ಕೆಲಸ, ಪರಿಶ್ರಮದ ಬಗ್ಗೆ ಮೆಚ್ಚುಗೆ ಮಾತನಾಡುವುದು ಸಹಜ. ಆ ಸಮಯದಲ್ಲಿ ಕೆಲವರು ಅತಿರೇಕದ ಮಾತನಾಡಿ, ಸಾರ್ವಜನಿಕರಿಂದ ಟೀಕೆಗೆ ಗುರಿಯಾಗುತ್ತಾರೆ. ಇದೀಗ, ತೆಲುಗಿನ ‘ಧಮಾಕಾ’ ನಿರ್ದೇಶಕ ತ್ರಿನಾದ ರಾವ್ ನಕ್ಕಿನ, ನಟಿ ಅಂಶು ಅಂಬಾನಿ ಬಗ್ಗೆ ಹೊಗಳಲು ಹೋಗಿ, ಎಡವಟ್ಟು ಮಾಡಿಕೊಂಡಿದ್ದಾರೆ. ಆ ಹೇಳಿಕೆಯೇ ಅವರಿಗೆ ತಿರುಗುಬಾಣವಾಗಿವೆ. ತ್ರಿನಾದ ‘ಮಜಾಕಾ’ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅಂಶು ಬಗ್ಗೆ ‘ಈ ಹುಡುಗಿ ಹೇಗೆ ಕಾಣಿಸುತ್ತಾಳೆ ಎಂಬುದೇ ನನಗೆ ಆಶ್ಚರ್ಯವಾಗಿತ್ತು. ಇವರ ಬಗ್ಗೆ ತಿಳಿಯಬೇಕಾದರೆ ಅವರ ‘ಮನ್ಮಥುಡು’ ಸಿನಿಮಾ ವೀಕ್ಷಿಸಬೇಕು. ಈಗಲೂ ಹಾಗೇಯೇ ತೆಳ್ಳಗಿದ್ದಾರೆ. ಚೆನ್ನಾಗಿ ಊಟ ಮಾಡಿ, ತೂಕ ಹೆಚ್ಚಿಸಿಕೊಳ್ಳಿ ಅಂತ ಹೇಳುತ್ತಿರುತ್ತೇನೆ. ಸೈಜ್ ಹೆಚ್ಚಿಸಿಕೊಳ್ಳುವುದು ತೆಲುಗು ಚಿತ್ರರಂಗಕ್ಕೆ ಅವಶ್ಯಕ. ಸದ್ಯ ಅವರು ಬೆಳವಣಿಗೆ ಕಂಡಿದ್ದಾರೆ’ ಎಂಬ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಅಲ್ಲದೇ, ರಾಜ್ಯ ಮಹಿಳಾ ಆಯೋಗ ನಿರ್ದೇಶಕನ ವಿರುದ್ಧ ನೋಟಿಸ್ ಜಾರಿ ಮಾಡಿ, ಕ್ಷಮೆಯಾಚಿಸುವಂತೆ ಆಗ್ರಹಿಸಿತ್ತು. ತಕ್ಷಣ ಎಚ್ಚೆತ್ತು ಕ್ಷಮೆಯಾಚಿಸಿರುವ ತ್ರಿನಾದ್, ‘ಇದು ಯಾವುದೇ ಪೂರ್ವಯೋಜಿತ ಹೇಳಿಕೆಯಲ್ಲ. ಇದೊಂದು ದುರದೃಷ್ಟಕರ. ನಾನು ವೈಯಕ್ತಿಕವಾಗಿ ಅಂಶು ಅವರಲ್ಲಿ ಕ್ಷಮೆಯಾಚಿಸುವೆ’ ಎಂದಿದ್ದಾರೆ.

ಇದಕ್ಕೆ ಅಂಶು ಪ್ರತಿಕ್ರಿಯಿಸಿದ್ದು, ‘ಅವರು ನೀಡಿರುವ ಹೇಳಿಕೆಗಳು ಯಾವುದೇ ಪೂರ್ವಯೋಜಿತವಲ್ಲ. ಅವರು ನನ್ನನ್ನು ಕುಟುಂಬದ ಸದಸ್ಯರಂತೆ ಭಾವಿಸುತ್ತಾರೆ. ಈ ಸಿನಿಮಾದಲ್ಲಿ 60 ದಿನಗಳ ಕಾಲ ಅವರ ಜತೆ ಕೆಲಸ ಮಾಡಿದ್ದೇನೆ. ಅವರು ಎಲ್ಲರನ್ನೂ ಗೌರವಿಸುತ್ತಾರೆ’ ಎಂದು, ಪ್ರಕರಣಕ್ಕೆ ಸುಖ್ಯಾಂತ ಹಾಡಿದ್ದಾರೆ. ಅಂಶು ಅಂಬಾನಿ 2002ರಲ್ಲಿ ತೆರೆಕಂಡಿದ್ದ ತೆಲುಗಿನ ‘ಮನ್ಮುದುಡು’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದು, ಬಳಿಕ ‘ರಾಘವೇಂದ್ರ’, ‘ಮಿಸ್ಸಮ್ಮ’ನಲ್ಲಿ ನಟಿಸಿದ್ದರು. ಇದೀಗ 20 ವರ್ಷಗಳ ಬಳಿಕ ‘ಮಜಾಕಾ’ ಮೂಲಕ ಟಾಲಿವುಡ್‌ಗೆ ಮರುಪ್ರವೇಶ ಪಡೆದಿದ್ದಾರೆ. -ಏಜೆನ್ಸೀಸ್