ನಿರ್ದೇಶಕ ಸಂಜಯ್ ಗುಪ್ತಾ ನಿಧನ 
ಸಿನಿವಾಣಿ

ಕಾಂಟೆ, ಜಿಂದಾ ಖ್ಯಾತಿಯ ಬಾಲಿವುಡ್​ ನಿರ್ದೇಶಕ ಸಂಜಯ್​ ಗುಪ್ತಾ ನಿಧನ..Sanjay Gupta

  • ಬಾಲಿವುಡ್​ನ ಹೆಸರಾಂತ ನಿರ್ದೇಶಕ ಸಂಜಯ್​ ಗುಪ್ತಾ ನಿಧನ

  • ಅಡುಗೆ ಮನೆಯಲ್ಲಿ ಕಾಲು ಜಾರಿ ಬಿದ್ದು, ತಲೆಗೆ ತೀವ್ರ ಪೆಟ್ಟು

  • ಸಂಜಯ್​ ದತ್, ಅನುಪಮ್​ ಖೇರ್​ ಸೇರಿದಂತೆ ಬಾಲಿವುಡ್​ ತಾರೆಯರಿಂದ ಸಂತಾಪ

ಕಾಂಟೆ, ಕಾಬಿಲ್​​, ಶೂಟೌಟ್​ ಅಟ್​ ಲೋಖಂಡ್ವಾಲಾ, ಜಾಜ್ಬಾ, ಮುಂಬೈ ಸಾಗಾದಂತಹ ಕ್ರೈಂ, ಥ್ರಿಲ್ಲರ್​​​ ಹಿಟ್​ ಸಿನಿಮಾಗಳನ್ನು ಬಾಲಿವುಡ್​ಗೆ ಕೊಟ್ಟಿದ್ದ ನಿರ್ದೇಶಕ ಸಂಜಯ್​ ಗುಪ್ತಾ(59) ಅವರು ಶುಕ್ರವಾರ ರಾತ್ರಿ ಮುಂಬೈನ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.

ಸಂಜಯ್​ ಗುಪ್ತಾ ಅವರು ಶುಕ್ರಾವರ ಮಧ್ಯಾಹ್ನ 2:30 ರ ಸುಮಾರಿಗೆ ಅವರು ಕಾಲು ಜಾರಿ ಬಿದ್ದಿದ್ದರು. ಇದರಿಂದ ತಲೆಗೆ ತೀವ್ರ ಗಾಯವಾಗಿತ್ತು. ಅ.30ರಂದು ರಾತ್ರಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ಅವರ ಸ್ನೇಹಿತ ಮತ್ತು ನಿರ್ದೇಶಕ ಮಿಲಾಪ್ ಜವೇರಿ ತಿಳಿಸಿದ್ದಾರೆ.

ಸದ್ಯ ವರ್ಸೋವಾ ಪೊಲೀಸರು, ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿಗೆ ಕಾರಣವಾದ ಸನ್ನಿವೇಶದ ಬಗ್ಗೆ ತನಿಖೆ ಮುಂದುವರೆಸಿದೆ. ಮನೆಯಲ್ಲಿ ಕುಟುಂಬಸ್ಥರೆಲ್ಲರೂ ಇದ್ದಗಲೂ ಇಂತಹ ಘಟನೆ ನಡೆಯಲು ಹೇಗೆ ಸಾಧ್ಯ ಎನ್ನುವ ತನಿಖೆ ಸದ್ಯ ಮುಂದುವರೆದಿದೆ. ಆದರೆ, ಅನುಮಾನಸ್ಪದ ಅಂಶಗಳು ಇನ್ನೂ ಕಂಡುಬಂದಿಲ್ಲ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಸಿನಿಮಾರಂಗದ ಗಣ್ಯರಿಂದ ಸಂತಾಪ

ನಿರ್ಮಾಪಕ ಅಶೋಕ್​ ಪಂಡಿತ್​​ ಅವರು ಎಕ್ಸ್​ನಲ್ಲಿ ಪೋಸ್ಟ್ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ. ಇದೊಂದು ಅಘಾತಕಾರಿ ಘಟನೆ. ನಮ್ಮ ಆತ್ಮೀಯ ಹಾಗೂ ಪ್ರತಿಭಾವಂತ ನಿರ್ದೇಶ ಸಂಜಯ್​ ಗುಪ್ತಾ ನಮ್ಮೊಂದಿಗೆ ಇಲ್ಲ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅಕಾಲಿಕವಾಗಿ ನಮ್ಮನ್ನು ಅಗಲಿದ್ದಾರೆ. ಅದ್ಭುತ ಕತೆಗಾರ. ಜೋಬನೋತ್ಸಾಹಿ. ಸಿನಿಮಾ ನಿರ್ಮಾಣ ಬಗ್ಗೆ ಒಲವು ಹೊತ್ತವರು. ಅವರ ಕುಟುಂಬ ಮತ್ತು ಆಪ್ತರಿಗೆ ನನ್ನ ಸಂತಾಪಗಳು. ಗುಪ್ತಾರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ. ಸಂಜಯ್​ ದತ್​, ಅನುಪಮ್​ ಖೇರ್​​ ಸೇರಿದಂತೆ ಬಾಲಿವುಡ್​ನ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.

ಸಂಜಯ್​ ಗುಪ್ತಾ ಬಗ್ಗೆ

ಸಂಜಯ್​ ಗುಪ್ತಾ ಅವರು ತಮ್ಮ ಸಿನಿಮಾ ಜರ್ನಿಯನ್ನು ಏಳು ಬೀಳುಗಳ ಸಮ್ಮಿಶ್ರಣ ಎನ್ನುತ್ತಿದ್ದರು. 1994ರಲ್ಲಿ ರಿಲೀಸ್ ಆಗಿದ್ದ ಆತಿಶ್; ಫೀಲ್​ ದಿ ಫೈರ್​ ಸಿನಿಮಾ ಮೂಲಕ ನಿರ್ದೇಶಕರಾಗಿ ಎಂಟ್ರಿ ಕೊಟ್ಟ ಅವರು 2002ರಲ್ಲಿ ರಿಲೀಸ್ ಆದ ಕಾಂಟೆ ಸಿನಿಮಾದಿಂದ ಭಾರಿ ಫೇಮಸ್ ಆದರು. ಇದು ಬಾಲಿವುಡ್​ ಸಿನಿಮಾರಂಗದಲ್ಲಿ ಭದ್ರವಾಗಿ ನೆಲೆಯೂರಲು ಸಹಕರಿಸಿದ ಸಿನಿಮಾ

ಸಂಜಯ್ ಗುಪ್ತಾ ಮತ್ತು ಸಂಜಯ್​ ದತ್​​​ ಕಾಂಬಿನೇಷನ್​ನ ಸಿನಿಮಾಗಳು ಸಖತ್​ ಸೆನ್ಸೇಷನ್​ ಕ್ರಿಯೇಟ್ ಮಾಡುತ್ತಿದ್ದವು. ಕಾಂಟೆ (2002), ಮುಸಾಫಿರ್ (2004), ಜಿಂದಾ (2006) ಮತ್ತು ಶೂಟೌಟ್ ಅಟ್ ಲೋಖಂಡ್ವಾಲಾ (2007) ಸಂಜಯ್​ ದತ್​ ಜೊತೆಗೆ ಕೆಲಸ ಮಾಡಿದ್ದ ಸಿನಿಮಾಗಳಾಗಿವೆ.

ಅಪರಾಧ ಸಿನಿಮಾಗಳ ಹೊರತಾಗಿ ಸಂಜಯ್​ ಗುಪ್ತಾ ಅವರು ಐಶ್ಬರ್ಯಾ ರೈ ಬಚ್ಚನ್​ ನಟನೆಯ ಜಜ್ಬಾ (2015), ಮತ್ತು ಹೃತಿಕ್ ರೋಷನ್ ಮತ್ತು ಯಾಮಿ ಗೌತಮ್ ಒಳಗೊಂಡಿರುವ ಕಾಬಿಲ್ (2017) ನಂತಹ ಸಿನಿಮಾಗೆ ಆಕ್ಷನ್​ ಕಟ್ ಹೇಳಿದ್ದರು. ಜಾನ್ ಅಬ್ರಹಾಂ ಮತ್ತು ಇಮ್ರಾನ್ ಹಶ್ಮಿ ನಟಿಸಿದ ಸಂಕಲನ ಚಿತ್ರ ದಸ್ ಕಹಾನಿಯಾನ್ (2007), ಆಸಿಡ್ ಫ್ಯಾಕ್ಟರಿ (2009) ಮತ್ತು ಮುಂಬೈ ಸಾಗಾ (2021) ಸಿನಿಮಾಗಳು ಸಾಕಷ್ಟು ಹಿಟ್ ಕಂಡಿದ್ದವು.

2001ರಲ್ಲಿ ಸಂಜಯ್​ ಗುಪ್ತಾ ಅವರು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದರು. ವೈಟ್ ಫೆದರ್ ಫಿಲ್ಮ್ಸ್ ಮೂಲಕ ಮಿರಾಂಡಾ ಬ್ರದರ್ಸ್(2024)​​​ ಚಿತ್ರ ನಿರ್ದೇಶಿಸಿ, ನಿರ್ಮಿಸಿದ್ದಾರೆ. ಕೂಕಿ ಗಲಾಟಿ ನಿರ್ದೇಶನದ ವಿಸ್ಫೋಟ್(2024) ಸಿನಿಮಾವನ್ನು ವೈಟ್ ಫೆದರ್ ಫಿಲ್ಮ್ಸ್ ನಿರ್ಮಿಸಿತ್ತು, (ಏಜೆನ್ಸೀಸ್)