ಬೆಂಗಳೂರು: ನಟ ದಿಗಂತ್ ಇದೀಗ ಹುಟ್ಟುಹಬ್ಬ ಮುಗಿಸಿದ್ದಾರೆ. ಅರೇ.. ಡಿಸೆಂಬರ್ನಲ್ಲೇ ಅವರ ಜನ್ಮದಿನ ಮುಗಿದುಹೋಯ್ತಲ್ಲ ಎಂದು ಅಚ್ಚರಿಪಡುವಂತಿಲ್ಲ. ಏಕೆಂದರೆ ಈ ಹುಟ್ಟುಹಬ್ಬ ಅವರ ಜನ್ಮದಿನಕ್ಕೆ ಸಂಬಂಧಿಸಿದ್ದಲ್ಲ. ಇದು ಅವರ ಅಭಿನಯದ ‘ಹುಟ್ಟುಹಬ್ಬದ ಶುಭಾಶಯಗಳು’ ಎಂಬ ನೂತನ ಸಿನಿಮಾ ವಿಚಾರ. ಅಂದರೆ, ಇತ್ತೀಚೆಗಷ್ಟೇ ಅವರ ಈ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಬಗ್ಗೆ ನಿರ್ದೇಶಕ ನಾಗರಾಜ್ ಬೇತೂರ್ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
‘ಇದೊಂದು ಕಾಮಿಡಿ-ಥ್ರಿಲ್ಲರ್ ಸಿನಿಮಾ. ಆದರೆ ದಿಗಂತ್ ಸೀರಿಯಸ್ ಆಗಿರುತ್ತಾರೆ. ಸ್ನೇಹಿತರು ಬರ್ತ್ಡೇ ಪಾರ್ಟಿಗೆ ಹೋದಾಗ ಅಲ್ಲಿ ನಡೆಯುವ ಘಟನೆಗಳನ್ನು ಇಟ್ಟುಕೊಂಡು ಚಿತ್ರ ಮಾಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕರು. ವಿಶೇಷವೆಂದರೆ, ಇದುವರೆಗೂ ಜಾಲಿಬಾಯ್ ಕ್ಯಾರೆಕ್ಟರ್ಗಳನ್ನೇ ಮಾಡಿಕೊಂಡು ಬಂದಿರುವ ದಿಗಂತ್ ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಸೀರಿಯಸ್ ಆಗಿ ಕಾಣಿಸಿಕೊಂಡಿದ್ದಾರಂತೆ. ಸಿಂಪಲ್ ಸುನಿ ಜತೆ ಕೆಲಸ ಮಾಡಿದ ಅನುಭವ ಇರುವ ನಾಗರಾಜ್ಗೆ ನಿರ್ದೇಶಕರಾಗಿ ಇದು ಮೊದಲ ಪ್ರಯತ್ನ. ಈ ಚಿತ್ರದ ಚಿತ್ರೀಕರಣವೆಲ್ಲ ಬೆಂಗಳೂರು ಸುತ್ತಮುತ್ತ ನಡೆದಿದೆ.
ದಿಗಂತ್ಗೆ ಜೋಡಿಯಾಗಿ ನಟಿ ಕವಿತಾ ಗೌಡ ಅಭಿನಯಿಸಿದ್ದಾರೆ. ಜತೆಗೆ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರು ಮನು, ಸೂರಜ್, ವಾಣಿಶ್ರೀ ಸೇರಿ ಸಾಕಷ್ಟು ಮಂದಿ ನಟಿಸಿದ್ದಾರೆ. ‘ದ್ಯಾವ್ರೆ’ ಚಿತ್ರದಲ್ಲಿ ನಟಿಸಿದ್ದ ಚೇತನ್ ಗಂಧರ್ವ ಸಹ ಮುಖ್ಯಪಾತ್ರದಲ್ಲಿ ಇರಲಿದ್ದಾರೆ. ಆನಂದ ರಾಜ ವಿಕ್ರಮ ಹಿನ್ನೆಲೆ ಸಂಗೀತ ನೀಡಿದ್ದು, ಶ್ರೀಧರ್ ಸಂಭ್ರಮ್ ಹಾಡುಗಳಿಗೆ ರಾಗ ಸಂಯೋಜಿಸಿದ್ದಾರೆ. ‘ಅಯೋಗ್ಯ’, ‘ಚಮಕ್’ ಸಿನಿಮಾಗಳ ನಿರ್ವಪಕ ಡಾ.ಟಿ.ಆರ್.ಚಂದ್ರಶೇಖರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.