ಸಿನಿವಾಣಿ

ಜನ್ಮದಿನದ ಸಂಭ್ರಮದಲ್ಲಿ ‘ನಾದಬ್ರಹ್ಮ’; ಹಂಸಲೇಖ ಅವರ ನಿಜವಾದ ಹೆಸರೇನು ಗೊತ್ತೇ?

ಬೆಂಗಳೂರು: ನಾದಬ್ರಹ್ಮ ಹಂಸಲೇಖ ಅವರಿಗಿಂದು 70ನೇ ಹುಟ್ಟುಹಬ್ಬದ ಸಂಭ್ರಮ. ನೆಚ್ಚಿನ ಸಂಗೀತಗಾರನಿಗೆ ಇಡೀ ಸ್ಯಾಂಡಲ್​ವುಡ್​ ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದೆ. ಅವರೊಂದಿಗಿನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಬರ್ತ್​ಡೇ ವಿಶ್​ ಮಾಡುತ್ತಿದ್ದಾರೆ. ಈ ನಡುವೆ ಹಂಸಲೇಖ ಅವರ ಬಗ್ಗೆ ಗೊತ್ತಿಲ್ಲದ ಒಂದಷ್ಟು ವಿಚಾರಗಳು ಇಲ್ಲಿವೆ.

ಅಂದಹಾಗೆ, ಹಂಸಲೇಖ ಅವರ ನಿಜವಾದ ಹೆಸರೇನು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಹಂಸಲೇಖ ಅವರ ನಿಜವಾದ ಹೆಸರು ಗಂಗರಾಜು. ಹಾಗಾದರೆ, ಅವರಿಗೆ ಹಂಸಲೇಖ ಎಂದು ಹೆಸರು ಬಂದಿದ್ದಾದರೂ ಹೇಗೆ? ಚಿಕ್ಕಂದಿನಲ್ಲಿ ಗಂಗರಾಜು ಅವರಿಗೆ ಹಂಸ ಬ್ರಾಂಡ್​ನ ಪೆನ್​ವೊಂದನ್ನು ಅವರ ಟೀಚರ್ ಉಡುಗೊರೆಯಾಗಿ ನೀಡಿದ್ದರು. ಅಂದಿನಿಂದ ಅದೇ ಹೆಸರೇ ಶಾಶ್ವತವಾಗಿ ಉಳಿಸಿಕೊಂಡು ಬಂದಿದ್ದಾರೆ.

ಕಳೆದ ಮೂರು ದಶಕಗಳಿಂದ ಸ್ಯಾಂಡಲ್​ವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ನಾದಬ್ರಹ್ಮ ಎಂದೇ ಕರೆಸಿಕೊಂಡಿರುವ ಹಂಸಲೇಖ, 500ಕ್ಕೂ ಅಧಿಕ ಸಿನಿಮಾಗಳಲ್ಲಿ ಸಾಹಿತಿಯಾಗಿ, ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 1973ರಲ್ಲಿ ತ್ರಿವೇಣಿ ಚಿತ್ರಕ್ಕೆ ಗೀತ ಸಾಹಿತಿಯಾಗಿ ಎಂಟ್ರಿ ಕೊಟ್ಟ ಅವರು, ಅದಾದ ಬಳಿಕ ಮತ್ತೆಂದೂ ಹಿಂದೆ ನೋಡುವ ಪ್ರಸಂಗವೇ ಎದುರಾಗಿಲ್ಲ. ಅದರಲ್ಲೂ ರವಿಂಚಂದ್ರನ್ ಮತ್ತು ಹಂಸಲೇಖ ಕಾಂಬಿನೇಷನ್​ಲ್ಲಿ ಮೂಡಿ ಬಂದ ಹಾಡುಗಳೂ ಈಗಲೂ ಎವರ್​ಗ್ರೀನ್. ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ.. ಹೀಗೆ ನೂರಾರು ಪ್ರಶಸ್ತಿಗಳು ಹಂಸಲೇಖ ಅವರನ್ನು ಅರಸಿ ಬಂದಿವೆ.