ದಳಪತಿ ವಿಜಯ್ ಮತ್ತು ನಟಿ ತ್ರಿಷಾ ಕೃಷ್ಣನ್
- ದಳಪತಿ ವಿಜಯ್ ಜನ್ಮದಿನಕ್ಕೆ ಶುಭಕೋರದ ನಟಿ ತ್ರಿಷಾ ಕೃಷ್ಣನ್
- ಸೋಷಿಯಲ್ ಮೀಡಿಯಾದಲ್ಲಿ ನಟನನ್ನು ಅನ್ಫಾಲೋ ಮಾಡಿದ ಬ್ಯೂಟಿ
Trisha Krishnan: ತಮಿಳುನಾಡಿನ ಸಿಎಂ ವಿಜಯ್ ಮತ್ತು ತಮಿಳಿನ ಸ್ಟಾರ್ ಬ್ಯೂಟಿ, ನಟಿ ತ್ರಿಷಾ ಕೃಷ್ಣನ್ ನಡುವೆ ಏನೋ ವೈಮನಸ್ಸು ಮೂಡಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗುಮಾನಿ ಎಬ್ಬಿಸಿವೆ. ಅದಕ್ಕೆ ಪುಷ್ಠಿ ಎನ್ನುವಂತೆ ತ್ರಿಷಾ ವಿಜಯ್ರನ್ನು ಅನ್ಫಾಲೋ ಮಾಡಿರುವುದು. ಇದು ಸ್ಟಾರ್ ಜೋಡಿಯ ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.
ನಟನ ಡಿವೋರ್ಸ್ ಸುದ್ದಿ ಹೊರಬಿದ್ದಾಗಿನಿಂದ ತ್ರಿಷಾ ಹೆಸರು ಪದೇ ಪದೇ ಸದ್ದು ಮಾಡುತ್ತಿದೆ. ವಿಜಯ್ ದಾಂಪತ್ಯ ಜೀವನ ಮುರಿದುಬೀಳಲು ನಟಿಯೇ ಕಾರಣ ಎಂಬ ಊಹಾಪೋಹಗಳು ಜಾಲತಾಣಗಳಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿದೆ. ಅದು ವಿಜಯ್ ಅವರು ಚುನಾವಣೆಗೆ ಸ್ಪರ್ಧಿಸುತ್ತಿರುವ ಸಮಯದಲ್ಲೇ. ಕಾಂಟ್ರೋವರ್ಸಿಗಳ ನಡುವೆಯೇ ದಾಖಲೆಯ ಗೆಲುವು ಸಾಧಿಸಿದ ದಳಪತಿ, ತಮಿಳುನಾಡಿನ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ಅಂದು ನಟನ ಪ್ರಮಾಣವಚನಕ್ಕೆ ಆಗಮಿಸಿದ್ದ ಬ್ಯೂಟಿ ಈಗ ವಿಜಯ್ ಹುಟ್ಟುಹಬ್ಬಕ್ಕೆ ಶುಭಕೋರದೆ ಇರುವುದು ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಜೂನ್ 22ರಂದು ವಿಜಯ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ, ರಾಜಕೀಯ ಗಣ್ಯರು, ಚಿತ್ರರಂಗದ ಸೆಲೆಬ್ರಿಟಿಗಳು ಮತ್ತು ನಟನ ಅಭಿಮಾನಿಗಳು ನೇರವಾಗಿ ಮತ್ತು ಜಾಲತಾಣಗಳಲ್ಲಿ ಶುಭ ಹಾರೈಸಿದರು. ಆದರೆ, ಫ್ಯಾನ್ಸ್ ಬಹಳ ಕಾತರದಿಂದ ಕಾಯುತ್ತಿದ್ದದ್ದು ನಟಿ ತ್ರಿಷಾ ಪೋಸ್ಟ್ಗೆ. ಕಾರಣ, ಕಳೆದ ಮೂರು ವರ್ಷಗಳಿಂದ ವಿಜಯ್ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡುತ್ತಾ, ವಿಶ್ ಮಾಡುತ್ತಿದ್ದ ಸೌತ್ ಬ್ಯೂಟಿ, ಈ ಬಾರಿಯ ದಳಪತಿ ಹುಟ್ಟುಹಬ್ಬಕ್ಕೆ ಫೋಟೋ ಇರಲಿ, ಸಿಂಪಲ್ ಆಗಿಯೂ ಶಭಾಶಯ ಹೇಳಿಲ್ಲ.
ನಟಿಯ ಈ ನಡೆ ನೆಟ್ಟಿಗರಲ್ಲಿ, ಇವರಿಬ್ಬರ ನಡುವೆ ಏನೋ ಮನಸ್ತಾಪ, ಬಿರುಕು ಮೂಡಿರಬಹುದು ಎಂಬ ಅನುಮಾನಗಳಿಗೆ ಕಾರಣವಾಗಿದೆ. ತಮ್ಮ ಬಹುಕಾಲದ ಸ್ನೇಹ ಸಂಬಂಧಕ್ಕೆ ಬಹುಶಃ ಈ ಮೂಲಕ ತ್ರಿಷಾ ಫುಲ್ಸ್ಟಾಪ್ ಹಾಕಿರಬಹುದು ಎಂಬುದು ನೆಟ್ಟಿಗರ ಅನಿಸಿಕೆ. ಈ ವಿಚಾರದಲ್ಲಿ ಸಕ್ರಿಯರಾಗಿರುವ ಒಂದಷ್ಟು ಅಭಿಮಾನಿಗಳು, ತಮಗೆ ಅನಿಸಿದಂತೆ ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ಪ್ರಸ್ತುತ, ಕಾಲಿವುಡ್ನಲ್ಲಿ ಇದು ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದ್ದು, ಮತ್ತೊಂದೆಡೆ ವಿಜಯ್ ಮತ್ತು ಸಂಗೀತಾ ಒಂದಾಗಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ,(ಏಜೆನ್ಸೀಸ್).