ಬೆಂಗಳೂರು: ಕನ್ನಡ ರಾಪರ್, ಸಂಗೀತ ನಿರ್ದೇಶಕ, ನಟ ಚಂದನ್ ಶೆಟ್ಟಿ ಬಾಳಲ್ಲಿ ಬಿರುಗಾಳಿ ಬೀಸಿದೆ. ಚಂದನ್ ಶೆಟ್ಟಿ - ನಿವೇದಿತಾ ಗೌಡ ದಾಂಪತ್ಯ ಜೀವನ ಮುರಿದುಬಿದ್ದಿದೆ. ಪರಸ್ಪರ ಪ್ರೀತಿಸಿ ಮದುವೆಯಾದ ಚಂದನ್ ಶೆಟ್ಟಿ - ನಿವೇದಿತಾ ಗೌಡ ಇದೀಗ ದೂರಾಗಿದ್ದಾರೆ. ಪರಸ್ಪರ ಒಪ್ಪಿಗೆಯ ಮೇರೆಗೆ ಚಂದನ್ ಶೆಟ್ಟಿ - ನಿವೇದಿತಾ ಗೌಡ ವಿಚ್ಛೇದನ ಪಡೆದಿದ್ದಾರೆ.
ಇದನ್ನೂ ಓದಿ: ಮಗು ವಿಚಾರಕ್ಕೆ ಚಂದನ್ ಶೆಟ್ಟಿ - ನಿವೇದಿತಾ ಗೌಡ ಮಧ್ಯೆ ಕಿರಿಕ್? ಚಂದನ್ ಶೆಟ್ಟಿ- ನಿವೇದಿತಾ ಹೇಳಿದ್ದೇನು?
ಇದರ ಬೆನ್ನಲ್ಲೇ ಅನೇಕ ವದಂತಿಗಳು ಹುಟ್ಟಿಕೊಂಡವು. ಅವುಗಳ ಬಗ್ಗೆ ಸ್ಪಷ್ಟನೆ ನೀಡಲು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ವಿಚ್ಛೇದನ ಪ್ರಕ್ರಿಯೆ ವೇಳೆ ಪತಿಯಿಂದ ಪತ್ನಿ ಜೀವನಾಂಶ ಕೇಳುವುದು ಸಾಮಾನ್ಯ. ಆದರೆ, ಪತಿ ಚಂದನ್ ಶೆಟ್ಟಿ ಅವರಿಂದ ನಿವೇದಿತಾ ಗೌಡ ಕೋಟ್ಯಾಂತರ ರೂಪಾಯಿ ಜೀವನಾಂಶ ಕೇಳಿದ್ದಾರೆ ಎಂಬ ವದಂತಿಗೆ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
‘ನಿವೇದಿತಾ ಗೌಡ ಅವರು ನನ್ನಿಂದ ಯಾವುದೇ ಜೀವನಾಂಶ ಕೇಳಿಲ್ಲ. ನಾನು ಕೊಟ್ಟಿಲ್ಲ. ಅವರು ಕೋಟ್ಯಾಂತರ ರೂಪಾಯಿ ಬೇಡಿಕೆ ಇಟ್ಟಿದ್ರೂ ಅಂತ ವದಂತಿ ಆಗಿತ್ತು. ಖಂಡಿತವಾಗಿಯೂ ಈ ವಿಚಾರ ಸುಳ್ಳು ಎಂದು ಗಾಯಕ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಮಗು ಪಡೆಯುವ ವಿಚಾರದಲ್ಲಿ ನಾನು ನಿವೇದಿತಾಗೆ ಒತ್ತಾಯ ಮಾಡಿದ್ದೇನೆ ಎಂಬ ವದಂತಿ ಕೂಡ ಹಬ್ಬಿದೆ. ಅದು ಸಹ ನಿಜವಲ್ಲ. ನಾನು ಒತ್ತಾಯ ಮಾಡಿಲ್ಲ. ಮಕ್ಕಳ ವಿಚಾರದಲ್ಲಿ ನಿವೇದಿತಾ ಕೂಡ ನಿರಾಕರಿಸಿಲ್ಲ’ ಎಂದು ಚಂದನ್ ಶೆಟ್ಟಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಜೀವನಾಂಶದ ಬಗ್ಗೆ ಲಾಯರ್ ಅನಿತಾ ಹೇಳಿದ್ದೇನು?
‘’ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ.. ಇಬ್ಬರೂ ವೃತ್ತಿಜೀವನದಲ್ಲಿ ಬಿಜಿಯಾಗಿದ್ದಾರೆ. ಹೀಗಾಗಿ, ಯಾರೂ ಜೀವನಾಂಶ ಕೇಳಿಲ್ಲ. ತುಂಬಾ ಗೌರವಯುತವಾಗಿ ದಾಂಪತ್ಯ ಜೀವನದಿಂದ ಇಬ್ಬರೂ ಹೊರಗೆ ಬಂದಿದ್ದಾರೆ. ಇಬ್ಬರಿಗೂ ಒಬ್ಬರಿಗೊಬ್ಬರ ಮೇಲೆ ತುಂಬಾ ಗೌರವ ಇದೆ’’ ಎಂದು ಲಾಯರ್ ಅನಿತಾ ಹೇಳಿದ್ದರು.