ಸಿನಿವಾಣಿ

ಧ್ರುವ ಹೊಸ ಚಿತ್ರ ಯಾವಾಗ ಶುರು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ ...

ಬೆಂಗಳೂರು: ಧ್ರುವ ಸರ್ಜಾ ಅಭಿನಯದ ಹೊಸ ಚಿತ್ರದ ಸ್ಕ್ರಿಪ್ಟ್​ ಪೂಜೆಯು ನವರಾತ್ರಿಯ ಮೊದಲ ದಿನವಾದ ಶನಿವಾರದಂದು ಬಸವೇಶ್ವರ ನಗರದ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಚಿತ್ರತಂಡದ ಕಲಾವಿದರು ಮತ್ತು ತಂತ್ರಜ್ಱರು ಭಾಗವಹಿಸಿದ್ದರು.

ಚಿತ್ರದ ಸ್ಕ್ರಿಪ್ಟ್​ ಪೂಜೆಯೇನೋ ಆಯಿತು, ಚಿತ್ರ ಪ್ರಾರಂಭವಾಗುವುದು ಯಾವಾಗ? ಚಿತ್ರದ ಹೆಸರೇನು? ಯಾರೆಲ್ಲಾ ಇರುತ್ತಾರೆ? ಎಂಬ ಪ್ರಶ್ನೆಗಳು ಸಹಜ. ಸದ್ಯಕ್ಕೆ ಚಿತ್ರತಂಡದವರು ಇದ್ಯಾವ ಪ್ರಶ್ನೆಗಳಿಗೂ ಉತ್ತರಿಸುವ ಮೂಡ್​ನಲ್ಲಿಲ್ಲ. ಈ ಎಲ್ಲಾ ಪ್ರಶ್ನೆಗಳಿಗೂ ಒಂದೊಂದು ದಿನ ಉತ್ತರ ಸಿಗಲಿದೆ.

ಅಂದಹಾಗೆ, ಈ ಚಿತ್ರದ ಪ್ರಾರಂಭ ಯಾವಾಗ ಎಂದರೆ, ಅದಕ್ಕೆ ಉತ್ತರ ಅಕ್ಟೋಬರ್​ 26 ಎಂದು ಹೇಳಲಾಗುತ್ತಿದೆ. ಅಂದು ಬೆಳಿಗ್ಗೆ ಐದು ಗಂಟೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಚಿತ್ರದ ಚಿತ್ರೀಕರಣ ಅಧಿಕೃತವಾಗಿ ಪ್ರಾರಂಭ ಮಾಡಲಾಗುತ್ತದೆ. ಚಿತ್ರೀಕರಣ ಪ್ರಾರಂಭವಾದರೂ, ಚಿತ್ರದ ಹೆಸರು ಬಯಲಾಗುವುದು ನವೆಂಬರ್​ ಆರಕ್ಕೆ. ಅಂದು ಚಿತ್ರೆ ಶೀರ್ಷಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ. ಮಿಕ್ಕಂತೆ ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ ಎಂಬ ವಿಷಯವನ್ನು ಹಂತಹಂತವಾಗಿ ಬಹಿರಂಗಪಡಿಸಲಾಗುತ್ತದಂತೆ.

ಧ್ರುವ ಅಭಿನಯದ ಈ ಚಿತ್ರವನ್ನು ಉದಯ್​ ಮೆಹ್ತಾ ನಿರ್ಮಿಸುತ್ತಿದ್ದು, ನಂದಕಿಶೋರ್​ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ಸಹ ಅವರೇ ರಚಿಸಿದ್ದಾರೆ. ಈ ಮಧ್ಯೆ, ನಂದಕಿಶೋರ್​ ನಿರ್ದೇಶನದಲ್ಲಿ ಧ್ರುವ ಸರ್ಜಾ ಅಭಿನಯಿಸಿರುವ 'ಪೊಗರು' ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದ್ದು, ಇದೀಗ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ.